ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದಾಸರ ಕೀರ್ತನೆಗಳು ಸಮಾಜದಲ್ಲಿ ಬದಲಾವಣೆ ಮತ್ತು ಸಾಮಾಜಿಕ ಚಿಂತನೆಯನ್ನು ಮಾಡುವ ದೃಷ್ಟಿಯಿಂದ ಸೃಷ್ಟಿಯಾದವು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡ ಭಕ್ತ ಕನಕದಾಸರ ೫೩೮ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾಸಶ್ರೇಷ್ಠ ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಮೌಢ್ಯವನ್ನು ಹೋಗಲಾಡಿಸಲು ಮುಂದಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆಗಳು ಇಡೀ ದೇಶಕ್ಕೆ ಮಾದರಿ. ಒಂದು ಉತ್ತಮ ಕುಟುಂಬದಲ್ಲಿ ಜನಿಸಿದಂತಹ ಕನಕದಾಸರು ಸಮಾಜದಲ್ಲಿರುವ ತಾರತಮ್ಯ ಹಾಗೂ ಮೌಢ್ಯತೆಗಳನ್ನು ತಿಳಿದು, ತಮ್ಮ ಸಿರಿತನವನ್ನು ತ್ಯಜಿಸಿ ಬಡವರಿಗಾಗಿ ಬಂದವರು ಕನಕದಾಸರು ಎಂದರು.
ಈ ವೇಳೆ ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಮಾತನಾಡಿ, ಜನರಲ್ಲಿದ್ದಂತಹ ಭೇದದ ಮನೋಭಾವ, ಶ್ರೇಷ್ಠತೆಯ ಮನೋಭಾವವನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎಂಬುದನ್ನು ಸಾರಿದಂತಹ ದಾಸ ಶ್ರೇಷ್ಠರು. ಕನಕದಾಸರ ಕೀರ್ತನೆಯಲ್ಲಿರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಕುರುಬ ಸಮಾಜದ ಇತಿಹಾಸ, ಪುರಾಣ, ದೇವರು, ಸಾಮಾಜಿಕ ಕೊಡುಗೆ ಇಂತಹ ಅನೇಕ ಮುಖ್ಯವಾದ ವಿಚಾರಗಳನ್ನು ತಿಳಸಿಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಇಂಡಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.ಪಾಟೀಲ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಶ್ರೀಶೈಲ ಕವಲಗಿ ಮಾತನಾಡಿದರು.
ಕಾರ್ಯಕ್ರಮ ಮುಂಚೆ ಕನಕದಾಸ ವೃತ್ತದಿಂದ ಭವ್ಯ ಮೆರವಣಿಗೆಯು ವಿವಿಧ ಕಲಾವಿದರಿಂದ ಡೊಳ್ಳು, ಕುದುರೆ ಕುಣಿತ, ಕುಂಭಮೇಳದೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಲಿಜಂತಿ ಪಟ್ಟದ ಪೂಜಾರಿ ಮಾಳಿಂಗರಾಯ ಮಹಾರಾಜರು, ಶಂಕರಲಿಂಗ ಮಹಾರಾಜರು, ಗುಬ್ಬೇವಾಡದ ಕನ್ನಯ್ಯ ಮಹಾರಾಜರು, ಬಳಗಾನೂರದ ಸೋಮರಾಯ ಪಟ್ಟದ ಪೂಜಾರಿಗಳು ವಹಿಸಿದ್ದರು.
ಸಮಾಜದ ಮುಖಂಡರಾದ ಮಲ್ಲಣ್ಣ ಸಾಲಿ, ರಮೇಶ ಭಂಟನೂರ, ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ, ಸುದರ್ಶನ ಜಂಗಣ್ಣಿ, ಪ್ರಶಾಂತ ಸುಣಗಾರ, ವಿಠ್ಠಲ ಮಾಗಣಗೇರಿ, ನಾಗಪ್ಪ ಶಿವೂರ, ರವಿಕಾಂತ ನಾಯ್ಕೋಡಿ, ಶಿಲ್ಪಾ ಕುದರಗೊಂಡ, ಡಾ.ಎಂ.ಎಂ.ತಡಲಗಿ, ಮಲ್ಲು ಸಾವಳಸಂಗ, ವಿಠ್ಠಲ ನಾಯ್ಕೋಡಿ ಸೇರಿದಂತೆ ಅನೇಕರಿದ್ದರು.

