ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅವರ ಎಡಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಮಾಜ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಒತ್ತಾಯಿಸಿದ್ದಾರೆ.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನಕ ಸೇನೆ ಹಾಗೂ ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಿತ್ತೂರ ರಾಣಿ ಚೆನ್ನಮ್ಮನವರ ಮೂರ್ತಿಯ ಎಡಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಜಿಲ್ಲೆಯ ಸಚಿವರು ಮತ್ತು ಶಾಸಕರು ಕಾರ್ಯಪ್ರವೃತ್ತರಾಗಬೇಕು. ಕೇವಲ ವೇದಿಕೆ ಸಮಾರಂಭಗಳಲ್ಲಿ ಮತ ಗಳಿಕೆಗಾಗಿ ಮಾತ್ರ ರಾಯಣ್ಣ ಚೆನ್ನಮ್ಮಳ ಪುತ್ರ ಎಂದು ಹೇಳುವುದು ಬೇಡ. ರಾಯಣ್ಣನ ಮೂರ್ತಿಯನ್ನು ಚೆನ್ನಮ್ಮಾ ಜೀ ಅವರ ಮೂರ್ತಿ ಎಡಭಾಗದಲ್ಲಿ ಪ್ರತಿಷ್ಠಾಪನೆ ಮಾಡಿಸುವ ಮುಖೇನ ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಕನಕ ಸೇನೆಯ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಆಲಮೇಲ ಕುರುಬ ಸಂಘದ ತಾಲೂಕಾಧ್ಯಕ್ಷ ಸಿದ್ದು ಕೆರಿಗೊಂಡ ಮಾತನಾಡಿ, ಜ.೦೯ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಅವರು ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ ಹಾಗೂ ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಲು ಆಗಮಿಸಲಿದ್ದಾರೆ. ಅಡಿಗಲ್ಲು ಸಮಾರಂಭವಾಗುವ ದಿಸೆಯಲ್ಲಿ ಜಿಲ್ಲೆಯ ಈರ್ವ ಸಚಿವರು ಹಾಗೂ ಎಲ್ಲ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಅಂದು ಸಿಎಂ ಅವರು ಅಡಿಗಲ್ಲು ಸಮಾರಂಭ ಮಾಡಲೆಬೇಕು. ಒಂದು ವೇಳೆ ಮಾಡದೇ ಹೋದರೆ ಸಚಿವರು ಮತ್ತು ಶಾಸಕರು ಇನ್ನು ಮುಂದೆ ಸಮಾಜದಲ್ಲಿ ಯಾವುದೇ ಸಮಾರಂಭದಲ್ಲಿ ಭಾಗಿಯಾಗಿದ್ದರೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ನಾಗಪ್ಪ ಶಿವೂರ, ಪ್ರಕಾಶ ಅಡವಿ, ವಿಠ್ಠಲ ನಾಯ್ಕೋಡಿ, ದತ್ತು ಯಡಗಿ ಸೇರಿದಂತೆ ಅನೇಕರಿದ್ದರು.

