ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಉತಾರೆ ಮತ್ತು ಮತದಾರರ ಪಟ್ಟಿ ಪರಿಶೀಲಿಸುವಂತೆ ಒತ್ತಾಯಿಸಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಮುಖಂಡ ಬಸವರಾಜ ಕೊಳೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಆರಂಭಿಸಿದ ಧರಣಿ ಸತ್ಯಾಗ್ರಹ ಮೂರು ದಿನಗಳನ್ನು ಪೂರ್ಣಗೊಳಿಸಿ ನಾಲ್ಕನೇ ದಿನಕ್ಕೆ ಕಾಲಿಸಿರಿಸಿದೆ.
ಮೂರನೇ ದಿನದ ಹೋರಾಟದಲ್ಲಿ ಧರಣಿಯ ನೇತೃತ್ವ ವಹಿಸಿದ ಬಸವರಾಜ ಕೊಳೂರ, ಪುರಸಭೆ ಮಾಜಿ ಸದಸ್ಯ ರಾಜು ಪಾತ್ರೋಟ, ಬಡಾವಣೆಯ ನಿವಾಸಿಗಳಾದ ನಾರಾಯಣ ಮಿರಜಕರ, ಅಂಬರೀಶ ಉಪಲದಿನ್ನಿ, ರಿಯಾಜ ಉಣ್ಣಿಭಾವಿ ಮತ್ತೀತರರು ಮಾತನಾಡಿ ಧರಣಿ ಮೂರನೇ ದಿನದ ಅಂತ್ಯ ಕಂಡರು ಅಧಿಕಾರಿಗಳು ನಮಗೆ ಉತಾರೆ ಕೊಡಿಸುವ ಪ್ರಯತ್ನ ಮಾಡುತ್ತಿಲ್ಲ. ಧರಣಿ ಸ್ಥಳಕ್ಕೆ ಭೇಟಿ ಕೂಡ ನೀಡಿಲ್ಲ. ಹಾಗಾಗಿ ನಾಳೆಯಿಂದ ನಾವು ಹೋರಾಟವನ್ನು ಉಗ್ರವಾಗಿಸುತ್ತಿದ್ದೇವೆ. ನಾಳೆ ಇಡೀ ದಿನ ತಮಟೆ ಬಾರಿಸುವ ಮೂಲಕ ನಮ್ಮ ಹೋರಾಟವನ್ನು ಉಗ್ರವಾಗಿಸುತ್ತೇವೆ. ಆಗಲೂ ಅಧಿಕಾರಿಗಳು ಭೇಟಿ ನೀಡದಿದ್ದರೆ ಅರೆ ಬೆತ್ತಲೆ ಚಳುವಳಿ ಪ್ರಾರಂಭಿಸುತ್ತೇವೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಧರಣಿಗೆ ಅಮರೇಶ ಉಪಲದಿನ್ನಿ, ವಿಷ್ಣು ಗಂಗಾಪುರ್, ಬಾಬು ಬಳಗಾನೂರ, ಮಂಜುನಾಥ್ ಚಲವಾದಿ, ಶೇಖರ ಢವಳಗಿ, ಸೀನು ಕಲಾಲ, ಬಬಲು ಮಕಾಂದಾರ, ಮಹೆಬೂಬ ಮಕಾಶಿ, ಆಸೀಫ ನಿಡಗುಂದಿ, ಆನಂದ ಭಜಂತ್ರಿ ಸೇರಿದಂತೆ ಮತ್ತೀತರರು ಸಾಥ್ ನೀಡಿದರು.

