ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಡಿ.ದೇವರಾಜ ಅರಸು ಹಿಂದುಳಿವ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ದಿಢೀರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಗೋದಿ ಹಿಟ್ಟಿನಲ್ಲಿ, ಅಕ್ಕಿಯಲ್ಲಿನ ಹುಳು ನೋಡಿ ಎಂತಾವ ಆಹಾರ ಪದಾರ್ಥ ಬಳಸ್ತಿರಿ ಇದಕ್ಕೆ ಹೆಂಗ್ರಿ ನೀವು ಇಲ್ಲಿ ಕಾರ್ಯನಿರ್ವಹಿಸುತ್ತಿರಿ ಮಕ್ಕಳಿಗೆ ಒಳ್ಳೆ ಆಹಾರ ಪದಾರ್ಥ ಇಟ್ಟುಕೊಳ್ಳುವದಕ್ಕೆ ಆಗಲ್ವಾ, ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಿರಾ ಹೇಗೆ ಎಂದು ಮೇಲ್ವಿಚಾರಕರನ್ನು ಪ್ರಶ್ನಿಸಿದರು.
ಸರ್ಕಾರ ದಿಂದ ನಡೆಯುವ ವಸತಿ ನಿಲಯಗಳ ವ್ಯವಸ್ಥೆ ಸುಧಾರಿಸಬೇಕು ನಿಲಯದಲ್ಲಿ ಇರುವ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆದಿಲ್ಲ, ತಿಂಗಳಿಗೊಮ್ಮೆ ವಿತರಿಸಲಾಗುವ ಸ್ಯಾನಿಟರಿ ಪ್ಯಾಡ್‌ಗಳನ್ನು ಬಿಸಾಕಲು ಪ್ರತ್ಯೇಕ ಡಸ್ಟ್ರಿನ್‌ಗಳಿಲ್ಲ, ತಿಂಗಳಿಗೊಮ್ಮೆ ಪಡಿತರ ವಿತರಿಸಲಾಗುತ್ತಿದ್ದು ಆಹಾರ ಧಾನ್ಯಗಳಲ್ಲಿ ಹುಳ ಬಿದ್ದಿವೆ.
ಒಂದು ರೂಮ್‌ನಲ್ಲಿ ಆರು ಜನ ವಿದ್ಯಾರ್ಥಿನಿಯರು ಇರುತ್ತಾರೆ ನಾಲ್ವರಿಗೆ ಮಾತ್ರ ಮಲಗುವ ವ್ಯವಸ್ಥೆ ಇದೆ. ಇನ್ನಿಬ್ಬರು ವಿದ್ಯಾರ್ಥಿನಿಯರು ನೆಲದ ಮೇಲೆ ಮಲುಗುವ ಅನಿವಾರ್ಯತೆ ಇದೆ. ಮಕ್ಕಳಿಗೆ ಯೋಗ, ವ್ಯಾಯಾಮ, ಪ್ರಾರ್ಥನೆ ಮಾಡಲು ಸ್ಥಳಾವಕಾಶವಿಲ್ಲ. ಹೀಗೆ ಹಲವಾರು ಸಮಸ್ಯೆಗಳು ವಸತಿ ನಿಲಯದಲ್ಲಿದ್ದು ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯುವದಾಗಿ ತಿಳಿಸಿದರು.
ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ಸಾಕಷ್ಟು ಜಾಗರೂಕರಾಗಿರಬೇಕು, ಮೊಬೈಲ್ ಬಳಕೆ, ದುಶ್ಚಟಗಳಿಗೆ ಅಂಟಿ ಕೊಳ್ಳುವದು ಮುಂತಾದ ದುರಾಭ್ಯಾಸಗಳಿಂದ ದೂರವಿದ್ದು, ಸರ್ಕಾರ ದಿಂದ ನೀಡಿರುವ ಸೌಲತ್ತುಗಳನ್ನು ಸದ್ಬಳಿಕೆ ಮಾಡಿಕೊಳ್ಳುವ ಮೂಲಕ ಚೆನ್ನಾಗಿ ಶಿಕ್ಷಣ ಪಡೆದು ಮನೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.
2024ರಲ್ಲಿ ವಸತಿ ನೀಲಯಕ್ಕೆ ಬಂದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದುವಕ್ಕೆ ನೀಡದೆ ಹಾಗೆ ಗಂಟು ಕಟ್ಟಿದ್ದರು, ಹೊಸದಾದ ಹಿಟ್ಟು ರುಬ್ಬುವ ಯಂತ್ರ ಒಮ್ಮೆಯೂ ಬಳಸದೆ ಇಟ್ಟಿರುವುದು ತುಕ್ಕು ಹಿಡಿಯುತ್ತಿದೆ ಆಹಾರ ಪದಾರ್ಥಗಳಲ್ಲಿನ ದೂಳು, ನುಸಿಗಳನ್ನು ನೋಡಿದ ಶಾಸಕ ಗುಡಗುಂಟಿ ಅವರು ಅಧಿಕಾರಿಗಳು ವಿರುದ್ದ ತಿವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ. ಡಾ.ವಿಜಯಲಕ್ಷ್ಮೀ ತುಂಗಳˌ ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಗೀತಾ ಸೂರ್ಯವಂಶಿ, ಕವಿತಾ ಲಗಳಿ, ತನಿಜಾ ದೊಡಮನಿ, ಭಾರತಿ ಜಾಧವ, ರೇಖಾ ವಡೆಯರ, ಶ್ರೀಧರ ಕಂಬಿ ಇತರರು ಇದ್ದರು.

