ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೂರ್ತಿ ಟ್ರಸ್ಟ್,ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆ ಹಾಗೂ ಇವರ ಸಹಯೋಗದಲ್ಲಿ ಇದೇ ಜನವರಿ ೩ ಹಾಗೂ ೪ ರಂದು ಎರಡು ದಿನಗಳ ಕಾಲ ನಗರದ ಐತಿಹಾಸಿಕ ಸ್ಮಾರಕವಾದ ಗೋಳಗುಮ್ಮಟ ಆವರಣದಲ್ಲಿ ಭಾರತೀಯ ಶಾಸ್ತ್ರೀಯ ಕಲೋತ್ಸವವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಮೂರ್ತಿ ಟ್ರಸ್ಟ್ನ ಸಹಕಾರದೊಂದಿಗೆ ಭಾರತೀಯ ವಿದ್ಯಾಭವನ ಬೆಂಗಳೂರು ವತಿಯಿಂದ ಈ ಉತ್ಸವವನ್ನು ಆಯೋಜಿಸಲಾಗಿದೆ.
ಜ.೩ರಂದು ನಡೆಯುವ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ರಾಜ್ಯಸಭೆ ಸಂಸದರಾದ ಶ್ರೀಮತಿ ಸುಧಾಮೂರ್ತಿ, ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಭಾಗವಹಿಸಲಿದ್ದಾರೆ.
ಜ.೩ರಂದು ಪದ್ಮಶ್ರೀ ಪುರಸ್ಕೃತ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ವೆಂಕಟೇಶ್ ಕುಮಾರ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಪಂಡಿತ ರಘುನಾಥ ನಾಕೋಡ್ ಹಾಗೂ ಹಾರ್ಮೋನಿಯಂನಲ್ಲಿ ಪಂಡಿತ ಬಸವರಾಜ್ ಹಿರೇಮಠ ಅವರು ಸಹಭಾಗಿಯಾಗಲಿದ್ದಾರೆ. ಬಳಿಕ ವಿದ್ವಾನ್ ಮಿಥುನ್ ಶ್ಯಾಮ್ ಹಾಗೂ ತಂಡದವರಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಲಿದೆ.
ಎರಡನೇ ದಿನವಾದ ಜನವರಿ ೪ರಂದು, ಕರ್ನಾಟಕ ಸಂಗೀತ ವಾದ್ಯವೃಂದದಿಂದ ಆರಂಭವಾಗಲಿದೆ. ವೀಣೆಯಲ್ಲಿ ವಿದ್ವಾನ್ ಡಿ. ಬಾಲಕೃಷ್ಣ, ವಯಲಿನ್ನಲ್ಲಿ ವಿದ್ಯುಷಿ ಅದಿತಿ ಕೃಷ್ಣಪ್ರಕಾಶ್, ಬಾಂಸುರಿಯಲ್ಲಿ ವಿದ್ವಾನ್ ವಿ. ವಂಶೀಧರ್, ಮೃದಂಗದಲ್ಲಿ ವಿದ್ವಾನ್ ಅನಿರುದ್ಧ ಎಸ್. ಭಟ್, ಮತ್ತು ಮೋರ್ಸಿಂಗ್ನಲ್ಲಿ ಶ್ರೀಮತಿ ಭಾಗ್ಯಲಕ್ಷ್ಮಿ ಎಂ. ಭಟ್ ಭಾಗವಹಿಸಲಿದ್ದಾರೆ. ಉತ್ಸವದ ಸಮಾರೋಪ ಕಾರ್ಯಕ್ರಮವಾಗಿ, ನಾಡಂ ಎನ್ಸೇಂಬಲ್ ವತಿಯಿಂದ “ಕಥಕ್ ಕಿ ಖಾನಕ್” ಎಂಬ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮವನ್ನು ಮುರಳಿ ಮೋಹನ್ ಕಲ್ವಕಲ್ವ ಹಾಗೂ ಶ್ರೀಮತಿ ನಂದಿನಿ ಕೆ. ಮೆಹ್ತಾ ಅವರು ನಡೆಸಿಕೊಡಲಿದ್ದಾರೆ.
ಉತ್ಸವದ ಭಾಗವಾಗಿ, ಖ್ಯಾತ ಕಲಾವಿದ ಪಿ. ಎಸ್. ಕಡೇಮನಿ ಅವರ ನೇತೃತ್ವದಲ್ಲಿ ೧೪ ಮಂದಿ ಖ್ಯಾತ ಚಿತ್ರಕಲಾವಿದರು “ಲ್ಯಾಂಡ್ಸ್ಕೇಪ್ಸ್ ಆಫ್ ವಿಜಯಪುರ” ಎಂಬ ವಿಷಯದ ಮೇಲೆ ಸ್ಥಳದಲ್ಲಿಯೇ ಚಿತ್ರಗಳನ್ನು ರಚಿಸಲಿದ್ದಾರೆ. ಈ ಚಿತ್ರಗಳು ವಿಜಯಪುರದ ವಾಸ್ತುಶಿಲ್ಪ ಮತ್ತು ನೈಸರ್ಗಿಕ ಸೌಂದರ್ಯವನ್ನು ಸಂಭ್ರಮಿಸುತ್ತವೆ.
ಭಾರತೀಯ ಶಾಸ್ತ್ರೀಯ ಕಲಾರೂಪಗಳನ್ನು ಜನಸಾಮಾನ್ಯರಿಗೆ ಹತ್ತಿರ ಮಾಡುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕರಾದ ಶ್ರೀಮತಿ ನಾಗಲಕ್ಷ್ಮೀ ಕೆ. ರಾವ್, ಮೊಬೈಲ್: ೯೮೪೫೬೨೫೮೯೯ ಅವರನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.
