ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಷ್ಟ್ರೀಯ ಸೇವಾ ಯೋಜನೆಯಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಪರಿಸರ ಪ್ರೇಮ ಬೆಳೆಸಲು ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಗೆ ವ್ಯವಹಾರಿಕ ಮನೋಭಾವ ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಮಹತ್ವವುಳ್ಳವು ಎಂದು ಶ್ರೀಪದ್ಮರಾಜ ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಡಿ.ಪಾಟೀಲ ಕರೆ ನೀಡಿದರು.
ಸಿಂದಗಿ ನಗರದ ಆರ್.ಡಿ.ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯಡಿ ವಾರ್ಷಿಕ ವಿಶೇಷ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಾರ್ಥಕವಾಗಬೇಕಾದರೆ ವಿದ್ಯಾರ್ಥಿಗಳು ನಿಸ್ವಾರ್ಥತೆಯಿಂದ ದುಡಿದು ಶ್ರಮದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿ ಸ್ವಯಂಸೇವಕರು ೭ದಿನಗಳ ಕಾಲ ಬಂದಾಳ ಗ್ರಾಮವನ್ನು ದತ್ತು ಪಡೆದ ಗ್ರಾಮ ಸಮಾಜ ಸೇವೆ ಮಾಡುವ ಒಂದು ಕಾರ್ಯಕ್ರಮವಾಗುವ ಜೊತೆಗೆ ಸಮುದಾಯದೊಂದಿಗೆ ಸಂಪರ್ಕ ಬೆಳೆಸುವಂತಹ ಕಾರ್ಯಕ್ರಮವಾಗಿದೆ. ನಶಾ ಮುಕ್ತ ಭಾರತ ಅಭಿಯಾನ ಎಂಬ ಘೋಷವಾಖ್ಯದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಿಸಿದ್ದು, ವಿದ್ಯಾರ್ಥಿ ಸ್ವಯಂ ಸೇವಕರು ಬಂದಾಳ ಗ್ರಾಮವನ್ನು ನಶಾ ಮುಕ್ತ ಗ್ರಾಮವನ್ನಾಗಿ ಮಾಡಿ ಮಾದರಿಯಾಗಬೇಕು ಎಂದು ಆಶೀರ್ವದಿಸಿದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ ನೂಲಾನವರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಡಾ.ಶರಣಬಸವ ಜೋಗುರ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಸನ್ ಜೋಗುರ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಹೆಚ್.ಜಾಧವ, ಬಿ.ಬಿ.ಜಮಾದಾರ, ಸುನೀಲ ಪಾಟೀಲ, ಗವಿಸಿದ್ದಪ್ಪ ಆನೆಗುಂದಿ, ಜೆಟ್ಡೆಪ್ಪ ಗಾಣಿಗೇರ, ಶಿವರಾಜ ಕುಂದಗೋಳ, ಸ್ನೇಹಾ ಧರಿ, ನವೀನ ಶೆಳ್ಳಗಿ, ಸುಬಾಸ ಹೊಸಮನಿ, ರೋಹಿತ ಸುಲ್ಪಿ, ನೀಲಕಂಠ ಮೇತ್ರಿ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

