ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಗಳ ಫಲವಾಗಿ ವಿಶೇಷ ರೈಲು | ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಂಗಳೂರು- ವಿಜಯಪುರ ರೈಲು ಸಂಚಾರ ಅವಧಿಯನ್ನು 14 ಗಂಟೆಯಿಂದ 10 ಗಂಟೆಗೆ ಇಳಿಸಲು ಐದು ಸಲ ನಡೆಸಿರುವ ಸಭೆಗಳು ಮತ್ತು ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿರುವ ನಿರಂತರ ಸಭೆಗಳ ಫಲವಾಗಿ ಈ ವಿಶೇಷ ರೈಲು ಓಡಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಂಗಳೂರು- ವಿಜಯಪುರ ರೈಲು ಸಂಚಾರ ಅವಧಿ ಕಡಿಮೆ ಮಾಡುವ ನಿಟ್ಟಿನಲ್ಲಿ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಾಟಕ್ಕೆ ಅವಕಾಶ ನೀಡುವುದು ಮುಖ್ಯವಾಗಿದೆ. ಇರದಿದ್ದರೆ ಈ ಮಾರ್ಗದ ರೈಲುಗಳು ಹುಬ್ಬಳ್ಳಿ ಮತ್ತು ಗದಗ ಎರಡೂ ಕಡೆ ನಗರದೊಳಗೆ ಇರುವ ರೈಲು ನಿಲ್ದಾಣಗಳಿಗೆ ಹೋಗಲು ಮತ್ತು ಅಲ್ಲಿ ಎಂಜಿನ್ ಬದಲಾವಣೆಗೆ ತುಂಬಾ ಹೊತ್ತು ನಿಲ್ಲುವುದರಿಂದ ರೈಲು ಪ್ರಯಾಣ ದೀರ್ಘವಾಗಲು ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
14 ರಿಂದ 15 ಗಂಟೆಗಳ ಪ್ರಯಾಣದ ಸುದೀರ್ಘ ಸಮಯವನ್ನು 10 ಗಂಟೆಗಳಿಗೆ ಇಳಿಸಲು ಹಲವು ಸಭೆಗಳನ್ನು ಮಾಡಿ ಪತ್ರಗಳನ್ನು ಬರೆಯಲಾಗಿದೆ. ಸತತ ಫಾಲೋ-ಅಪ್ ಸಭೆಗಳನ್ನು ಏರ್ಪಡಿಸಲಾಗಿದೆ. ಅದರ ಫಲವಾಗಿ ಈಗ ಇದೇ ಮೊದಲ ಬಾರಿಗೆ ಬುಧವಾರ ವಿಶೇಷ ರೈಲು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ಬಂದಿದೆ.
2024ರ ಮಾರ್ಚ್ 14ರಂದು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಪ್ರಪ್ರಥಮ ಸಭೆ ನಡೆಸಲಾಗಿದೆ. ಇದಾದ ಮೇಲೆ 2024ರ ಸೆಪ್ಟೆಂಬರ್ 9ರಂದು, 2025ರ ಏಪ್ರಿಲ್ 16 ಮತ್ತು ಮೇ 31 ಹಾಗೂ ಡಿಸೆಂಬರ್ 3ರಂದು ಹೀಗೆ ಒಟ್ಟು ಐದು ಸಭೆಗಳನ್ನು ನಡೆಸಿದ್ದೇನೆ. ಇಷ್ಟೆಲ್ಲ ಆದಮೇಲಷ್ಟೆ ರೈಲ್ವೆ ಅಧಿಕಾರಿಗಳು ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ರೈಲು ಓಡಿಸಲು ಅಭ್ಯಂತರವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದರ ಫಲವಾಗಿ ಮೊನ್ನೆ ವಿಶೇಷ ರೈಲನ್ನು ಓಡಿಸಿದ್ದಾರೆ.
ಇದರ ಜೊತೆಗೆ ಮೈಸೂರು-ಫಂಡರಫುರ ನಡುವೆ ಸಂಚರಿಸುವ ಗೋಲಗುಂಬಜ ಎಕ್ಸಪ್ರೆಸ್ ರೈಲನ್ನು ಕೂಡ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕವೇ ಓಡಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆಯುತ್ತಿದ್ದೇನೆ. ಅಲ್ಲದೇ, ಮುಂದಿನ ಕ್ರಮಗಳತ್ತ ಗಮನ ಹರಿಸಿದ್ದೇನೆ. ವಾಸ್ತವಿಕ ಪರಿಸ್ಥಿತಿ ಹೀಗಿರುವಾಗ ವಿಶೇಷ ರೈಲು ಓಡಿದ ನಂತರ ಸಂಸದರು ಹೇಳಿಕೆ ನೀಡಿದ್ದು, ಅದನ್ನು ಸಹ ಜುಲೈ 23 ರಂದು ರೇಲ್ವೆ ಸಚಿವರನ್ನು ಭೇಟಿಯಾಗಿರುವ ಹಳೆಯ ಫೋಟೋ ಬಳಸಿ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ. ಅದರ ಬದಲಾಗಿ ಸಂಸದರು ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸೇವೆ ಪ್ರಾರಂಭಿಸಲು ತಮ್ಮ ಪ್ರಯತ್ನವನ್ನು ಮಾಡಬೇಕು ಎಂದು ಸಚಿವ ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

