ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರತಿ ವರ್ಷದಂತೆ ಈ ವರ್ಷವೂ ಗೊಟ್ಯಾಳ ಗ್ರಾಮದ ಗ್ರಾಮ ದೇವತೆಗಳಾದ ಜಾಂಗೀರಬಾಷಾ ಹಾಗೂ ದಾವಲಮಲಿಕ ಜಾತ್ರಾ ಮಹೋತ್ಸವವನ್ನು ಜ.1 ರಿಂದ ಜ.3 ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವದು ಎಂದು ಜಾತ್ರಾ ಕಮೀಟಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಜ.1 ರಂದು ಬೆಳಿಗ್ಗೆ 10 ಗಂಟೆಗೆ ಹೊರ ರಾಜ್ಯಗಳಿಂದ ಆಗಮಿಸುವ ಪ್ರತಿಷ್ಠಿತ ಶ್ವಾನಗಳ ಸ್ಪರ್ಧೆ ನಡೆಯಲಿದೆ. ರಾತ್ರಿ 8 ಗಂಟೆಗೆ ನಾನಾರೀತಿಯ ವಾದ್ಯಗಳು ನುಡಿಸುವ ಕಾರ್ಯಕ್ರಮ ಜರುಗುವದು ಹಾಗೂ ಚಿತ್ರವಿಚಿತ್ರ ಸುಡುಮದ್ದು ಸುಡುವದರೊಂದಿಗೆ ಆಕಾಶದಲ್ಲಿ ನೋಡುಗರ ಗಮನಸೆಳೆಯಲಿದೆ ಎಂದರು.
ನಂತರ ಜಾಂಗೀರಬಾಷಾ ಹಾಗೂ ದಾವಲಮಲಿಕ ದೇವರಿಗೆ ಗಂಧಲೇಪನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಪ್ರತಿಷ್ಠಿತ ಕಲಾ ತಂಡದವರಿಂದ ಹರದೇಶಿ–ನಾಗೇಶಿ ಗೀ–ಗೀ ಪದಗಳ ಕಾರ್ಯಕ್ರಮ ಜರುಗಲಿದೆ.
ಶುಕ್ರವಾರ ಜ.2 ರಂದು ನಸುಕಿನ ಜಾವ ಭಕ್ತಾದಿಗಳಿಂದ ದಿರ್ಘದಂಡ ನಮಸ್ಕಾರ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ದಿನವಿಡಿ ದೇವರಿಗೆ ಭಕ್ತಾದಿಗಳಿಂದ ಹರಕೆ ನೈವೇದ್ಯ ಹಾಗೂ ದಿನವಿಡಿ ವಿವಿಧ ಕಲಾ ತಂಡಗಳಿಂದ ಗೀ–ಗೀ ಪದಗಳ ಕಾರ್ಯಕ್ರಮಗಳು ನಡೆಯಲಿವೆ.
ಶನಿವಾರ ಜ.3 ರಂದು ನಸುಕಿನ 4 ಗಂಟೆಗೆ ವಿವಿಧ ವಾದ್ಯ ವೃಂದಗಳೊಂದಿಗೆ, ಚಿತ್ರವಿಚಿತ್ರ ಮದ್ದು ಸುಡುತ್ತ ಸರಕಾರಿ ಗಲೀಫ್ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುವ ಸುಪ್ರಸಿದ್ಧ ರಾಷ್ಟ್ರಮಟ್ಟದ ಕುಸ್ತಿ ಪಟುಗಳಿಂದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 10 ಗಂಟೆಗೆ “ಹಣೆ ನನ್ನದಾದರೂ ಹಣೆಬರಹ ನನ್ನದಲ್ಲ” ಎಂಬ ಸಾಮಾಜಿಕ ನಾಟಕದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳುವದು ಎಂದು ಗೊಟ್ಯಾಳ ಗ್ರಾಮದ ಜಾತ್ರಾ ಕಮೀಟಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ ತಿಳಿಸಿದ್ದಾರೆ.

