ಬಸವ ತತ್ವದಡಿಯಲ್ಲಿ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಚಿಂತನ-ಮಂಥನ ಸಮಾವೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಡೆದಾಡುವ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ಜನ್ಮಭೂಮಿ ಪವಿತ್ರ ಬಿಜ್ಜರಗಿಯಲ್ಲಿ ಇದೇ ದಿನಾಂಕ ೩೦ ರಂದು ವೈಕುಂಠ ಏಕಾದಶಿಯಂದು ೩೩೦ ಜೋಡೆತ್ತಿನ ಬಂಡಿಗಳ ಐತಿಹಾಸಿಕ ಸಮಾವೇಶ ಹಾಗೂ ಬಸವ ತತ್ವದಡಿಯಲ್ಲಿ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಚಿಂತನ-ಮಂಥನ ಸಮಾವೇಶ ನಡೆಯಲಿದೆ. ಕೀನ್ಯಾ ಸೇರಿದಂತೆ ಹಲವು ಭಾಗಗಳಿಂದ ಪರಿಣಿತರು ಭಾಗವಹಿಸಿ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಜೆ. ನಾಡಗೌಡ ಮಾಹಿತಿ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹತ್ವಪೂರ್ಣವಾಗಿರುವ ಈ ಸಮಾವೇಶಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ, ನಂದಿ ಕೂಗು ಅಭಿಯಾನದ ಅಡಿಯಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ೩ನೇ ಪುಣ್ಯ ಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ,
ಮುಗಳಖೋಡ ಮಠದ ಶ್ರೀ ಡಾ.ಮುರಘರಾಜೇಂದ್ರ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ಜರಗುವುದು. ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಯುವ ಸನ್ಯಾಸಿ ಶಶಿಕಾಂತ ಗುರುಜಿ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನುಡಿಗಳನ್ನಾಡಲಿದ್ದಾರೆ, ಜೋಡೆತ್ತಿನ ಕೃಷಿಯ ಕುರಿತು ವಿಶೇಷ ಒಲವು ಹೊಂದಿರುವ ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚುನ್ನಪ್ಪ ಪುಜಾರಿ ಆಗಮಿಸಲಿದ್ದು, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೀನ್ಯಾ ದೇಶದಲ್ಲಿ ಬೃಹತ್ ಕೃಷಿ ಉದ್ದಿಮೆ ಸ್ಥಾಪಿಸುವುದರ ಜೊತೆಗೆ ನಂದಿ ಸಂತತಿ ರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಮಲ್ಲಿಕಾರ್ಜುನ ಕೋರಿ ಅವರು ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ ನಿರ್ಮಿಸುವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ನಾಡಗೌಡರು ವಿವರಿಸಿದರು.
ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕರಾದ ವೆಂಕನಗೌಡ ಪಾಟೀಲ ಹೇಳಿದರು.
ಬಸವ ತತ್ವವೆಂದರೆ ಜೋಡೆತ್ತಿನ ರೈತರು ತಮ್ಮ ಕಾಯಕದಿಂದ ಪಂಚ ಮಹಾಭೂತಗಳ ಜೀವಂತಿಕೆಯನ್ನು ಉಳಿಸುವುದರ ಜೊತೆಗೆ ಕಾಯಕ ಹಾಗೂ ದಾಸೋಹ ಸಂಸ್ಕೃತಿ ನಾಶವಾಗದಂತೆ ನೋಡಿಕೊಳ್ಳುವ ಕಲೆ ಎಂದು ಅರ್ಥ. ಕ್ರಿಸ್ತಶಕ ೬ ರಿಂದ ೧೨ ನೇ ಶತಮಾನದ ಕಾಲಘಟ್ಟದಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ ರಾಜರುಗಳು ಸುಸಂಸ್ಕೃತ ಸಮಾಜ ನಿರ್ಮಿಸಿದರು. ಸಮಾಜದಲ್ಲಿ ಜೋಡೆತ್ತಿನ ಕೃಷಿಕರ ಪಾದಗಳ ಕೊರತೆಯಾದರೆ ಸಮಾಜದ ಮಾರ್ಗದರ್ಶಕರಾದ ಗುರುಗಳಿಗೆ ಭವಿಷ್ಯವಿಲ್ಲ ಎಂದು ಅಣ್ಣ ಬಸವಣ್ಣ ಸಹ ಹೇಳಿದ್ದಾರೆ ಎಂದರು.
ಕೃಷಿಕರ ಬಸವ ತತ್ವಕ್ಕೆ ವಿರುದ್ಧವಾದ ಪೆಟ್ರೋಲ್ ಹಾಗೂ ಡೀಸೆಲ್ ಆಧಾರಿತ ತೈಲ ತತ್ವಕ್ಕೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡುತ್ತಾ ಬಂದ ಕಾರಣ ಜೋಡೆತ್ತಿನ ಕೃಷಿಕರು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ ಸಾಗುತ್ತಿವೆ. ಜೋಡೆತ್ತಿನ ಕೃಷಿ ನಾಶವಾದಂತೆ ರೈತರ ಸಾಗುವಳಿ ವೆಚ್ಚ ಹೆಚ್ಚಾಗಿ ರೈತರ ತೊಂದರೆ ಅಧಿಕವಾಗಿದೆ, ಈ ಹಿನ್ನೆಲೆಯಲ್ಲಿ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. ೧೧೦೦೦ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಕಾಮನ್ನವರ, ಬಸವರಾಜ ಬಿರಾದಾರ, ಬಸವರಾಜ ಕೋನರೆಡ್ಡಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

