ಆಲಮೇಲದಲ್ಲಿ ನಡೆದ ಜಿಲ್ಲಾ ಮಕ್ಕಳ ೧೨ ನೇ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ೫ ನಿರ್ಣಯಗಳ ಮಂಡನೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಶಂ.ಗು.ಬಿರಾದಾರ ರವರ “ನಾವು ಎಳೆಯರು-ನಾವು ಗೆಳೆಯರು” ಗೀತೆಯನ್ನು ಮಕ್ಕಳ ಧ್ಯೇಯ ಗೀತೆಯನ್ನಾಗಿ ಮಾಡಬೇಕು- ಸಾತಿಹಾಳ
ಆಲಮೇಲ- ಆಲಮೇಲ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಜರುಗಿದ ೧೨ ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ಸಾತಿಹಾಳ ೫ ನಿರ್ಣಯಗಳನ್ನು ಮಂಡನೆ ಮಾಡಿ ಸರಕಾರಕ್ಕೆ ಒತ್ತಾಯಿಸಿದರು.
ಸಮ್ಮೇಳನದ ಹಿರಿಯ ಮಕ್ಕಳ ಸಾಹಿತಿಗಳ ಒತ್ತಾಯದಂತೆ ವಿಜಯಪುರ ಜಿಲ್ಲೆಯ ಹೆಸರಾಂತ ಮಕ್ಕಳ ಸಾಹಿತಿ ಶಂ.ಗು.ಬಿರಾದಾರ ರವರ ನಾವು ಎಳೆಯರು ನಾವು ಗೆಳೆಯರು ಗೀತೆಯನ್ನು ಸರಕಾರ ಕರ್ನಾಟಕದ ಮಕ್ಕಳ ಧ್ಯೇಯ ಗೀತೆಯನ್ನಾಗಿ ಮಾಡಬೇಕು,ರಾಜ್ಯದಲ್ಲಿ ೧ ರಿಂದ ೫ ನೇ ತರಗತಿಯವರೆಗೆ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಜಾರಿ ಮಾಡಬೇಕು, ಸರಕಾರದ ಎಲ್ಲ ಆಡಳಿತ ಕಚೇರಿಗಳಲ್ಲಿ ಕನ್ನಡ ಅಂಕಿಗಳನ್ನು ಕಡ್ಡಾಯವಾಗಿ ಬಳಸಬೇಕು, ಮಕ್ಕಳ ಸಾಹಿತಿಗಳ ಪುಸ್ತಕಗಳನ್ನು ಸರಾಕರ ಖರೀದಿಸಿ ಎಲ್ಲಾ ಗ್ರಂಥಾಲಯಗಳಿಗೆ ಒದಗಿಸಬೇಕು, ಸ್ಥಳಿಯ ಮಕ್ಕಳ ಸಾಹಿತಿಗಳ ಹಾಗೂ ಪ್ರೌಢ ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಎಲ್ಲಾ ಶಾಲೆಗಳ ಮಕ್ಕಳಿಗೆ ಕೊಡಮಾಡಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಮಂಡನೆಗಳಿಗೆ ಜಿಲ್ಲಾ ಉಪಾಧ್ಯಕ್ಷ ಶಿವುಕುಮಾರ ಶಿವಶಿಂಪಿಗೇರ ಅನುಮೋದಿಸಿದರು.
ಈ ವೇಳೆ ಹಿರಿಯ ಸಾಹಿತಿಗಳಾದ ಜಂಬುನಾಥ ಕಂಚ್ಯಾಣಿ, ಡಿ.ಎನ್.ಅಕ್ಕಿ, ಕಾಡಣ್ಣ ಹೊಸಟ್ಟಿ, ಜಿಲ್ಲಾಧ್ಯಕ್ಷ ಪ್ರೊ.ಎ.ಆರ್.ಹೆಗ್ಗನದೊಡ್ಡಿ, ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ಮಕ್ಕಳ ಸಾಹಿತ್ಯ ಸಂಗಮದ ತಾಲೂಕು ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ನೌಕರರ ಸಂಘದ ಅಧ್ಯಕ್ಷರು, ಅಶೋಕ ತೆಲ್ಲೂರ,ರವಿ ಬಿರಾದಾರ , ಡಾ.ರಾಜೇಶ ಪಾಟೀಲ ಮುಂತಾದವರು ಇದ್ದರು

