ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಹೃದಯ ಕದ್ದ ಚೆಲುವೆ
ಜಿಂಕೆಯಂಥ ಹೊಳೆಯುವ ನಿನ್ನ ಕಣ್ಣೋಟದ ಸನ್ನೆಗೆ ಮರು ಮಾತು ಬರದೇ ಮನಸೋತೆ. ಮರುಕ್ಷಣವೇ, ಮಿಡಿವ ಹೃದಯವ ನಿನ್ನ ಹೆಸರಿಗೆ ಬರೆದೆ. ಗಿಳಿಯಂಥ ಸವಿ ನುಡಿಗೆ ಕಿವಿಯಾದೆ.. ಪ್ರೀತಿ ಎನ್ನುವ ಮಾಯೆಯೇ ಹಾಗಿರಬೇಕು. ನೀ ನಗುತ ಕರೆದರೆ ಮುಗಿದೇ ಹೋಯಿತು. ಮನಸ್ಸು ನಿರಾಕರಿಸುವುದು ಉಂಟೆ ಚೆಲುವೆ? ರಸ ಕಾವ್ಯದಂಥ ನಿನ್ನ ಯೌವ್ವನಕೆ ಪ್ರಥಮ ನೋಟದಲ್ಲೇ ಒಲವಿನ ಕುಸುಮ ಅರಳಿತು. ಪ್ರೀತಿ ಹೊಸ ಶಕ್ತಿ ಉಲ್ಲಾಸ ಉತ್ಸಾಹ ತುಂಬುತ್ತೆ ಅಂತ ಕೇಳಿದ್ದೆ. ಅದು ನಿಜಕ್ಕೂ ನಿಜ ಅನಿಸ್ತಿದೆ. ಮೊದಲಿನಂತಿಲ್ಲ ನಾನೀಗ. ಏನೇನೋ ಹೊಸ ಕನಸು ಕಾಣ್ತಿದಿನಿ. ಹೊಸ ಹುರುಪಿನಿಂದ ನಿನ್ನ ಓಣಿಯಲ್ಲಿ ಹಾಡುತ್ತ ಕುಣಿಯುತ್ತ ಓಡಾಡ್ತಿದಿನಿ. ನನ್ನ ಹರೆಯದ ಗೋಡೆಯ ಮೇಲೆ ನಿನ್ನದೇ ಚಿತ್ರ ಬರೆದಿರುವೆ.ಎದೆಯ ಭಿತ್ತಿಯ ಮೇಲೂ ನಿನ್ನದೇ ಕಚಗುಳಿಯಾಟದ ನರ್ತನ. ಪ್ರತಿ ದಿನ ಪ್ರತಿ ಕ್ಷಣ ನಿನ್ನದೇ ಧ್ಯಾನ. ಕಂಡ ಕಂಡ ಹುಡುಗಿಯರಲ್ಲೂ ನಿನ್ನನ್ನೇ ಕಾಣುತಿರುವೆ. ಹೂ ನಗೆಯ ನೋಟಕೆ ನಿನ್ನ ಮನೆ ಮುಂದೆ ಕಾಯುತಿರುವೆ. ಎಷ್ಟು ಹೇಳಿದರೂ ತೀರದ ಒಲವಿನ ಮತುಗಳು ಮನದಲ್ಲೇ ಉಳಿದು ಇನ್ನಿಲ್ಲದಂತೆ ಸತಾಯಿಸುತಿವೆ. ಹೇಳು ಚೆಲುವೆ ನೀನೆಂದು ಸಿಗುವೆ?

ಅದೊಂದು ಹಾಯಾದ ಮುಸ್ಸಂಜೆ ಒಂದಿಷ್ಟು ಹೊತ್ತು ಹಿತವಾಗಿ ಕಳೆಯೋಣವೆಂದು ಹೂದೋಟಕೆ ಬಂದಿದ್ದೆ. ಹೂದೋಟದಲ್ಲಿ ಚೆಂದದಿ ಅರಳಿದ ಗುಲಾಬಿ ಪಕ್ಕ ಕೆಂಗುಲಾಬಿಯಂತೆ ನಿಂತ ತ್ರಿಲೋಕ ಸುಂದರಿಯಂಥ ನಿನ್ನ ಕಂಡೆ. ಬೀಸುವ ತಂಗಾಳಿಗೆ ಓಲಾಡುವ ಮುಂಗುರುಳು ನಿನ್ನ ಕೆನ್ನೆಗೆ ಮುತ್ತುಕ್ಕುತ್ತಿದ್ದವು. ಇದ್ದಕ್ಕಿದ್ದಂತೆ ಬಿಳಿಯ ಮೋಡಗಳು ಜೋರಾಗಿ ಹನಿಯ ತೊಡಗಿದವು. ಒಮ್ಮಿಂದೊಮ್ಮೆಲೇ ಸುರಿವ ಮಳೆ ಹನಿಗೆ ನಾಚಿದ ಭೂಮಿ ಮೈ ಅರಳಿಸಿ ಪರಿಮಳ ಬೀರಿದಳು. ಮಣ್ಣಿನ ವಾಸನೆಯಲ್ಲಿ ಮೈ ಮರೆತು ನಿಂತಿದ್ದ ನನ್ನ ಮೈಗೆ ಹಿಂದಿನಿಂದ ಯಾರೋ ತಾಗಿದಂತಾಯ್ತು.. ತಿರುಗಿ ನೋಡಿದರೆ ಬಳಕುತಿರುವ ಹೂ ಬಳ್ಳಿಯ ಮೈ ಮಾಟದ ನೀನು! ಬೇಸಿಗೆಯ ಮಳೆಯಾದ್ದರಿಂದ ಯಾರೂ ಕೊಡೆ ತಂದಿರಲಿಲ್ಲ. ಹೀಗಾಗಿ ಎಲ್ಲರೂ ಇದ್ದ ಒಂದೇ ಛತ್‌ನಲ್ಲಿ ನೆರದಿದ್ದರು. ಕೂಡಿದ ಜನ ಆ ಕಡೆ ಈ ಕಡೆ ನೂಕಾಡುತ ನಿನ್ನನ್ನು ನನ್ನ ಕಡೆ ತಂದು ನಿಲ್ಲಿಸಿದ್ದಾರೆಂದು ತಿಳಿದು ಖುಷಿಯಾಯಿತು. ಆ ಗಳಿಗೆ ಸ್ವರ್ಗ ಮೂರೇ ಗೇಣು ಉಳಿದಿತ್ತು.
ನಿನ್ನುಸಿರಿಗೆ ನನ್ನುಸಿರು ಬೆರೆಯುವಷ್ಟು ಸನಿಹ.ಜೀವನದಲ್ಲಿ ಮೊದಲ ಬಾರಿ ಮೈಯಲೆಲ್ಲ ರೋಮಾಂಚನದ ಅನುಭವ. ನೋಡ ನೋಡುತ್ತಲೇ ಅರಿವಿಗೆ ಬಾರದಂತೆ ಮೈಯಲ್ಲೆಲ್ಲ ವಿದ್ಯುತ್ ಪ್ರವಹಿಸಿದಂತಾಗಿ ಬೆಚ್ಚಗಾದ ಅನುಭವ. ನಿನ್ನ ನವಿರಾದ ಗಲ್ಲಕೆ ನನ್ನ ಚಿಗುರು ಮೀಸೆ ತಾಗಿದಾಗ, ನೀ ತೊಟ್ಟ ರವಿಕೆ ಬಿಗಿಯಾಯಿತು ಅನಿಸುವ ಭಾವ ನಿನ್ನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಭಯದಿ ನಡಗುತ ನೀ ಬೀರಿದ ಕುಡಿ ನೋಟ ಎಂದೂ ಮರೆಯಲಾರೆ ಚೆಲುವೆ ನನ್ನ ಬೆರಳು ನಿನ್ನ ಕಿರು ಬೆರಳನ್ನು ಬೇಕೆಂತಲೇ ಕೆಣಕಿತೋ? ಆಕಸ್ಮಿಕವಾಗಿ ತಾಗಿತೋ ಗೊತ್ತಿಲ್ಲ. ಆದರೆ ಆ ಸ್ಪರ್ಶದ ಹಿತ ಅಬ್ಬಾ! ಅದನು ಹೇಳಲು ಪದಕೋಶಗಳಲ್ಲಿನ ಪದಗಳೇ ಸಾಲವು ಅನಿಸಿತು. ನಿನ್ನೆ ಮೊನ್ನೆಯವರೆಗೂ ಗೊತ್ತು ಪರಿಚಯವಿರದ ಹುಡುಗಿ ಒಮ್ಮೆಲೇ ನನ್ನವಳಾದ ಖುಷಿ. ಪದೇ ಪದೇ ಕರೆಯುವ ನಿನ್ನ ಮುಂಗುರುಳನು ಬೆರಳುಗಳ ಮಧ್ಯೆ ಸಿಕ್ಕಿಸಿ ಬಿಡಬೇಕು ಎನ್ನುವಷ್ಟರಲ್ಲಿ ಜನ ದಟ್ಟಣೆ ಹೆಚ್ಚಾಗಿ ಇಬ್ಬರ ಮೈ ಮನಗಳು ತನ್ನಷ್ಟಕ್ಕೆ ತಾನೇ ಕಚ್ಚಿಕೊಂಡಿದ್ದವು. ಕೊಂಚ ಅಲುಗಾಡಿದರೆ ಸಾಕು ಉಬ್ಬಿದ ಎದೆ ನನ್ನ ತೋಳಿಗೆ ಬಡಿಯುತ್ತೆ ಅನ್ನೋ ಹೊತ್ತಿಗೆ ಮಳೆ ಹನಿ ನಿಂತು, ನಿಂತ ಜನರೆಲ್ಲ ಚದುರಿದರು. ಇಬ್ಬರ ನಡುವೆ ಹೇಳಲಾಗದ ಒಲವಿನ ಸೆಳವಿತ್ತು. ಗಳಿಗೆಯಲ್ಲಿ ಪ್ರೀತಿ ಗರಿಗೆದರಿ ನಿಂತಿತ್ತು.
ಮೈಯಲ್ಲಿರುವ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ನಿನ್ನ ಹೆಸರು ಅಡ್ರೆಸ್ ಕೇಳಿದೆ. ದಿಟ್ಟತನದಿ ಉತ್ತರಿಸಿದ ರೀತಿ. ನನ್ನೆದೆಯಲಿ ಸಕ್ಕರೆಯಂಥ ಅಕ್ಕರೆ ಅರಳಿಸಿತು. ಬಹುಶಃ ನಿನಗೂ ಅಷ್ಟರಲ್ಲಿ ನನ್ನ ಮೇಲೆ ಒಲವು ಮೂಡಿತ್ತು ಎಂದೆನಿಸಿತು. ಪರಿಚಯದ ನೆಪದಲ್ಲಿ ನಿನ್ನ ಕೈ ಕುಲುಕಬೇಕೆಂದು ಮುಂದಾದಾಗ ಕೈಗಳನು ಜೋಡಿಸಿ ನಮಸ್ಕರಿಸಿದ ರೀತಿ ನೀನೊಬ್ಬ ಭಾರತಾಂಬೆಯ ಮಾದರಿ ಹೆಣ್ಣು ಮಗಳು ಎಂಬ ಹೆಮ್ಮೆ ಮೂಡಿಸಿತು. ನೀನಾಡುವ ಮಾತು ನೀನೆಷ್ಟು ಚಾಣಾಕ್ಷೆ ಬುದ್ಧಿವಂತೆ ಎಂಬುದನು ಸಾರಿ ಸಾರಿ ಹೇಳುತ್ತಿತ್ತು. ‘ಬನ್ನಿ ಪಕ್ಕದ ದರ್ಶಿನಿಯಲ್ಲಿ ಕಾಫಿ ಕುಡಿಯೋಣ.’ಎಂದು ಸಲುಗೆಯಲಿ ಆಹ್ವಾನಿಸಿದೆ. ಜೊತೆಗೆ ಮೆಲ್ಲನೇ ಒಲವಿನ ಮನವಿಯನ್ನೂ ಸಲ್ಲಿಸಿದೆ.ಅದಕ್ಕೆ ನೀನು, ‘ಹರೆಯದ ಕರೆಗೆ ಓಗೊಟ್ಟರೆ ಬದುಕಲ್ಲಿ ತುಂಬುವುದು ಬರೀ ಕಲ್ಲು ಮುಳ್ಳು. ಗುರಿಯ ಮಾರ್ಗದಲ್ಲಿ ಹುಚ್ಚು ಹರೆಯದ ಆಸೆಗಳು ತೊಡಕಾಗದಿರಲಿ. ಬಾಳ ಬಂಡಿಯ ನೊಗ ಹೊರುವಷ್ಟು ತಾಕತ್ತು ಗಳಿಸಿಕೊಂಡು ಬನ್ನಿ. ಆಗ ಪ್ರೇಮಿಯಾಗಿ ಪ್ರಾಣಕಾಂತೆಯಾಗಿ ಬಾಳಿನ ಕೊನೆಯುಸಿರು ಇರುವವರೆಗೂ ನಿನ್ನ ಬಾಹು ಬಂಧನದಲ್ಲಿ ನೆಚ್ಚಿನ ಮನದ ರಾಣಿಯಾಗಿ ಬಾಳುವೆ.’ ಎಂದೆ. ನೀನಾಡಿದ ಮಾತು ಮನದಾಳದಲ್ಲಿ ನಟ್ಟಿತು. ಹಗಲು ರಾತ್ರಿಯ ಪರಿವೆ ಇಲ್ಲದೇ ಗುರಿಯ ಬೆನ್ನು ಹತ್ತಿದೆ. ನಾನೀಗ ನನ್ನ ಮುದ್ದು ಮಕ್ಕಳಿಗೆ ತಾಯಿಯಾಗಲಿರುವ ನಿನ್ನನ್ನಷ್ಟೇ ಅಲ್ಲ, ನನ್ನ ಹೆತ್ತವರನ್ನು ಸಲುಹುವಷ್ಟು ಶಕ್ತನಾಗಿದ್ದೇನೆ ಚೆಲುವೆ.
ಇಷ್ಟೊಂದು ಅನಾಯಾಸಬಾಗಿ ನಿನ್ನಂಥ ತ್ರಿಪುರ ಸುಂದರಿಯ ಆಗಮನ ನನ್ನ ಜೀವನದಲ್ಲಿ ಆಗುತ್ತೆ ಅಂತ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ನೂರು ಜನುಮ ಬಂದರೂ ಈ ರೂಪವತಿ ನನ್ನ ಶ್ರೀಮತಿಯಾಗಲಿ ಎಂದು ಮುಕ್ಕೋಟಿ ದೇವರಲ್ಲಿ ಬೇಡುತಿರುವೆ. ‘ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ.’ ಎಂದು ಪ್ರೇಮ ವೀಣೆಯ ತಂತಿ ಮೀಟುತಿದೆ. ಬೇರೆ ಏನು ಕಾಣದ ಹಾಗೆ ಮಾಯವ ಮಾಡಿದ ಮಾಯಗಾತಿ ನೀನು. ಬೇಗ ಬಳಿ ಬಾ ಚೆಲುವೆ, ಒಲವಿನ ಕಡಲಲ್ಲಿ ನೂರಾರು ವರುಷ ಏರು ಯೌವ್ವನದ ಸವಿ ಸವಿಯುತ ನೂರ್ಕಾಲ ಬಾಳೋಣ..
ಇಂತಿ ನಿನ್ನವನಾದ ಚೆಲುವ


