ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯತೆ ಇಂದು ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಸುಕನ್ಯಾ ಚಳ್ಳಗೇರಿ ಹೇಳಿದರು.
ಪಟ್ಟಣದ ೯ನೇಅಂಗನವಾಡಿ ಕೇಂದ್ರದಲ್ಲಿ ಬುಧವಾರ ಸ್ನೇಹಸಂಸ್ಥೆ, ಐಎಲ್‌ಪಿ ಯೋಜನೆ, ಶಿಶು ಅಭಿವೃದ್ಧಿ ಯೋಜನೆ ಸಿಂದಗಿ, ಪಟ್ಟಣ ಪಂಚಾಯಿತಿ ದೇವರ ಹಿಪ್ಪರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾವು ಬಾಲ್ಯವಿವಾಹ, ಭ್ರೂಣಹತ್ಯೆ, ಲಿಂಗಪತ್ಯೆಗಳ ಕುರಿತು ಅರಿವು ಮೂಡಿಸಿ ತಡೆಯಬೇಕಿದೆ. ಜೊತೆಗೆ ಸಮುದಾಯದ ಪಾಲಕರಲ್ಲಿ ಜಾಗೃತಿ ಉಂಟು ಮಾಡಬೇಕಿದೆ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಪುಷ್ಪಾವತಿ ಬಿರಾದಾರ ಮಾತನಾಡಿ, ಶಾಲಾ ಮಕ್ಕಳ ಕಡ್ಡಾಯ ಹಾಜರಾತಿ, ಅಪೌಷ್ಠಿಕ ಮಕ್ಕಳ ರಕ್ಷಣೆ, ವಲಸೆ ಹೋಗುವ ಮಕ್ಕಳ ರಕ್ಷಣೆ ಮತ್ತು ಪಾಲಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಸ್ನೇಹ ಸಂಸ್ಥೆ ಜಿಲ್ಲಾ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಕಾವಲು ಸಮಿತಿಯನ್ನು ರಚಿಸಲಾಗಿದ್ದು, ಎಲ್ಲರೂ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸೋಣ. ಸಮುದಾಯದ ನವಗ್ರಹಗಳಂತೆ ಇರುವ ಇಲಾಖೆಗಳನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳ ಹಾಗೂ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವ ಕೆಲಸ ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯ ನಮ್ಮದಾಗಬೇಕು ಎಂದು ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಹೇಳಿದರು.
ಪೊಲೀಸ್ ಇಲಾಖೆಯ ಎಸ್.ಎಸ್.ಹಿರೇಕುರುಬರ ಮಾತನಾಡಿ, ಕಾನೂನುಗಳ ಸೇವೆಗಳು ಮತ್ತು ತಪ್ಪಿನ ಶಿಕ್ಷೆಯನ್ನು ನಾವು ಸಮುದಾಯದಲ್ಲಿ ತಿಳಿಸಬೇಕು. ನಮ್ಮ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಕೊಡಬೇಕು. ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಂತೆ ಇಂದು ನಾವು ನಮ್ಮ ಮಕ್ಕಳಿಗೆ ಹೇಳಬೇಕಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಸದಸ್ಯೆ ರತ್ನಾಬಾಯಿ ದೇವೂರ, ಅಂಗನವಾಡಿ ಮೇಲ್ವಿಚಾರಕಿ ಎ.ಪಿ. ಕುಂಬಾರ, ಪಟ್ಟಣ ಪಂಚಾಯಿತಿ ಪ್ರತಿನಿಧಿ ನಿಂಗಪ್ಪ ಸುಂಗಠಾಣ, ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ರಾವುತ ಮರಬಿ, ಗೌಡಪ್ಪ ಬಿರಾದಾರ, ಶಿಕ್ಷಕಿ ಪುಷ್ಪಾ ರೂಗಿ, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಅಂಬಿಕಾ ಕುಲಕರ್ಣಿ, ಮಕ್ಕಳ ಪ್ರತಿನಿಧಿಗಳಾದ ಮಹ್ಮದ್ ಅಪಾನ ಕಂಕರಪಿರ, ತಸ್ಮೀಯಾ ಮಸಳಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

