ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸ್ವಾತಂತ್ರ‍್ಯ ಪೂರ್ವದಲ್ಲೇ ಆಲಮಟ್ಟಿ-ಯಾದಗಿರಿ ಮಾರ್ಗ ರೈಲ್ವೆ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿರುವ ಯೋಜನೆಗೆ ಹೋರಾಟದ ಪರಿಣಾಮ ಮರುಸಮೀಕ್ಷೆಗೆ ಚಾಲನೆ ನೀಡಿರುವುದು ಮತ್ತು ಆಲಮಟ್ಟಿ-ಕುಷ್ಟಗಿಯ ಮಾರ್ಗ ಸಮೀಕ್ಷೆ ಪೂರ್ಣಗೊಳಿಸಿರುವದು ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಸ್ವಾಗತಿಸಿದೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ರೇಲ್ವೆ ಹೋರಾಟ ಸಮಿತಿಯ ಅವಿರತ ಪ್ರಯತ್ನದಿಂದಾಗಿ ಆಲಮಟ್ಟಿ-ಯಾದಗಿರಿ ಮಾರ್ಗ ಸಮೀಕ್ಷೆಗೆ ಟೆಂಡರ್ ಹಂತಕ್ಕೆ ಬಂದಿರುವುದು ಹಾಗೂ ಆಲಮಟ್ಟಿ -ಕುಷ್ಟಗಿಯವರೆಗೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಪೂರ್ಣಗೊಂಡು ೨೦೨೬ಮೇ ಅಂತ್ಯದೊಳಗಾಗಿ ಕ್ರಿಯಾಯೋಜನೆ(ಡಿಪಿಎಆರ್) ವರದಿ ಪೂರ್ಣಗಳ್ಳುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿರುವದು ಹುಮ್ಮಸ್ಸು ಇಮ್ಮಡಿಯಾಗಿದೆ.
ಆಲಮಟ್ಟಿ-ಯಾದಗಿರಿ ರೈಲ್ವೆ ನೂತನ ಮಾರ್ಗವು ಆಲಮಟ್ಟಿಯಿಂದ ಹುಲ್ಲೂರ ಗ್ರಾಮದವರೆಗೆ ಪೂರ್ಣಗೊಂಡಿತ್ತು.
ಆ ವೇಳೆ ಸ್ವಾತಂತ್ರ‍್ಯ ಚಳುವಳಿ ಉಗ್ರಹೋರಾಟ ತಳೆದಿರುವ ವೇಳೆಗೆ ಬ್ರಿಟಿಷ್ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮರಳಿ ಸ್ವದೇಶಕ್ಕೆ ತೆರಳಿದ್ದರಿಂದ ಕಾಮಗಾರಿ ಅಷ್ಟಕ್ಕೇ ಸೀಮಿತಗೊಂಡಿತು.
ಕಾಲಾನಂತರದಲ್ಲಿ ನೂತನ ಮಾರ್ಗ ನಿರ್ಮಾಣಕ್ಕೆ ಹಾಕಲಾಗಿದ್ದ ಜೆಲ್ಲಿಕಲ್ಲು ಸೇರಿದಂತೆ ಎಲ್ಲಾ ಸಲಕರಣೆಗಳು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
ಇದರ ಪರಿಣಾಮ ಆಲಮಟ್ಟಿ ಸಮೀಪದ ದೇವಲಾಪುರ ಹಳ್ಳದಲ್ಲಿ ಇಂದಿಗೂ ಸ್ಮಾರಕದಂತೆ ಸೇತುವೆಯ ಕಂಬಗಳು ಕಾಣಸಿಗುತ್ತವೆ.
ಸ್ವಾತಂತ್ರ‍್ಯ ನಂತರ ವ್ಯಾಪ್ತಿಯ ಗ್ರಾಮಗಳ ಮುಖಂಡರು ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡುತ್ತಾ ಬಂದಿದ್ದಾರೆ.
ಇತ್ತೀಚೆಗೆ ಆಲಮಟ್ಟಿ, ಮುದ್ದೇಬಿಹಾಳ ಸೇರಿದಂತೆ ಹಲವಾರು ಗ್ರಾಮ, ಪಟ್ಟಣಗಳ ನಾಗರಿಕರು ತೀವ್ರ ಹೋರಾಟ ಮಾಡಿದ್ದರ ಪರಿಣಾಮ ಕೇಂದ್ರ ಸರ್ಕಾರವು ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗಿದೆ.
ಇನ್ನು ಆಲಮಟ್ಟಿ- ಕೂಡಲಸಂಗಮ-ಹುನಗುಂದ- ಇಲಕಲ್ಲ- ಕುಷ್ಟಗಿ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರಿಂದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವಿಜಯಪುರ, ಬಾಗಲಕೋಟ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ ಲೋಕಸಭಾ ಸದಸ್ಯರು ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರುಗಳ ವಿಶೇಷ ಕಾಳಜಿಯಿಂದ ಎರಡು ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ದೊರೆತಂತಾಗಿದೆ.
ಯಾದಗಿರಿ-ಆಲಮಟ್ಟಿ ನೂತನ ಮಾರ್ಗದಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಸಂಪರ್ಕ ಕಲ್ಪಿಸುತ್ತದೆ.
ಆಲಮಟ್ಟಿ-ಕುಷ್ಟಗಿ ಮಾರ್ಗ ನಿರ್ಮಾಣ ಆಗುವದರಿಂದ ಬರದನಾಡು ವಿಜಯಪುರಕ್ಕೆ ರಾಜಧಾನಿ ಬೆಂಗಳೂರಿಗೆ ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ ಎಂದು ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಭರತರಾಜ್ ದೇಸಾಯಿ, ಉಪಾಧ್ಯಕ್ಷರಾದ ಎನ್.ಎ.ಪಾಟೀಲ, ರಮೇಶ ರೇಶ್ಮಿ, ಜಿಪಂ. ಮಾಜಿಸದಸ್ಯ ಶಿವಾನಂದ ಅವಟಿ, ತಾಪಂ.ಮಾಜಿ ಸದಸ್ಯ ಮಲ್ಲು ರಾಠೋಡ ಸಂಚಾಲಕ ಶಂಕರ ಜಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
