ಸರಣಿ ಕಳ್ಳತನ ತಡೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ
ಉದಯರಶ್ಮಿ ದಿನಪತ್ರಿಕೆ
ಚಡಚಣ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದರು ಕಳ್ಳತನ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ದರೂ ಸಂಪೂರ್ಣವಾಗಿ ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಳ್ಳೊಳ್ಳಿ ಗ್ರಾಮ ಘಟಕದ ಅಧ್ಯಕ್ಷ ಶಂಕರ ಬಡಿಗೇರ ಹೇಳಿದರು.
ಬಳ್ಳೊಳ್ಳಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ ಸುರೇಶ ಪವಾರ(ಜಾಧವ) ಅವರಿಗೆ ಕಳ್ಳರ ಹಾವಳಿ ಹೆಚ್ಚಾಗಿರಿವುದರಿಂದ ಬಳ್ಳೊಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಂಕರ ಬಡಿಗೇರ, ಬಳ್ಳೊಳ್ಳಿ ಗ್ರಾಮದಲ್ಲಿ ಈಗಾಗಲೇ ಹಲವು ಬಾರಿ ಸರಣಿ ಕಳ್ಳತನ ನಡೆದಿದ್ದು, ಈ ಕುರಿತು ಬಳ್ಳೂಳ್ಳಿ ಗಾ.ಪಂ.ಅಧ್ಯಕ್ಷ ಶಂಕರ ಬಡಿಗೇರ ಹಾಗೂ ಪಿಡಿಓ ಶ್ರೀಕಾಂತ ಕಲಮಡಿ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಸಾಮಾನ್ಯರ ಮಾತಿಗೆ ಕಿಂಚಿತ್ತು ಬೆಲೆ ಕೊಡದೆ ಉಡಾಫೆ ಉತ್ತರ ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ,ಜನಸಾಮಾನ್ಯರಿಗೆ ಕಷ್ಟಕೊಡುವುದೆ ಇವರ ಕೆಲಸವಾಗಿದೆ ಇನ್ನಾದರು ಎಚ್ಚತ್ತುಕೊಳ್ಳಬೇಕೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಲಯ ಅಧ್ಯಕ್ಷ ರವಿಕುಮಾರ ಹೂಗಾರ ಮಾತನಾಡಿ, ಈ ಹಿಂದೆಯೂ ಹಲವು ಬಾರಿ ಕಳ್ಳತನಗಳು ನಡೆದಿದ್ದು, ರವಿವಾರ ತಡರಾತ್ರಿ ಮತ್ತೆ ಬೀಗ ಒಡೆದು ಸರಣಿ ಕಳ್ಳತನ ನಡೆದಿದ್ದರೂ ಗಾ.ಪಂ.ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ಇಲಾಖೆಯಿಂದ ಈಗಾಗಲೇ ಆದೇಶ ಇದ್ದರೂ ಗ್ರಾಮದಲ್ಲಿ ಇನ್ನೂ ಸಿ.ಸಿ. ಕ್ಯಾಮೆರಾ ಅಳವಡಿಸಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ಯುವಕರು, ಮಹಿಳೆಯರು ಹಾಗೂ ಹಿರಿಯರನ್ನು ಒಳಗೊಂಡು ಗ್ರಾಮ ಪಂಚಾಯತ್ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಲಯ ಅಧ್ಯಕ್ಷ ರವಿಕುಮಾರ ಹೂಗಾರ ಎಚ್ಚರಿಸಿದರು.
ಗ್ರಾಮದ ಮೇಲೆ ನಿಗಾ ವಹಿಸಲು ಗ್ರಾಮದ ಪ್ರಮುಖ ಸ್ಥಳಗಳಾದ, ಗ್ರಾಮದ ಮುಖ್ಯ ದ್ವಾರ, ಜಾಮಿಯಾ ಮಸ್ಜೀದ್, ಭೀರಲಿಂಗೇಶ್ವರ ದೇವಸ್ಥಾನ, ಚಾವಡಿ ಕಟ್ಟಿ, ಮರಗಮ್ಮ ದೇವಸ್ಥಾನ ಈ ಐದು ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಾರಾಮ ವಾಲಿ, ಸದಾಶಿವ ರೇವತಗಾಂವ, ಸಿ.ಕೆ. ಬಿರಾದಾರ, ಬಾಲಕೃಷ್ಣ ಭೋಸಲೆ, ಮೈಹಿಬುನ್ ಅಳಗಿ, ಪ್ರವೀಣ ಬಡಿಗೇರ, ಡಿ.ಎಲ್. ಪಠಾಣ, ಸಂತೋಷ ಮಾಶ್ಯಾಳ, ಬಿ.ಎಸ್. ವಾಘೆ, ಲಲಿತಾ ಬಿಂದಗಿ,ಕಿರಣ ಮುನ್ನೊಳ್ಳಿ, ಮಲ್ಲಿಕಾರ್ಜುನ ಹಿರೇಮಠ, ಎಸ್.ಎನ್. ರೇವತಗಾಂವ, ಅಶೋಕ ಜುಂಜುರ್ಡೆ, ಸುನಿಲ್ ಜಾಧವ, ಈರಣ್ಣ ಭಜಂತ್ರಿ, ವಿಠಲ ಯರನಾಳ ಸೇರಿದಂತೆ ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಇದ್ದರು.

