ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐ.ಸಿ.ಎಸ್.ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಜಲನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ ಐ.ಸಿ.ಎಸ್.ಇ ಸ್ಕೂಲ್ ವಿದ್ಯಾರ್ಥಿನಿ ವರ್ಷಾ ಕುಂಬಾರ ನಗರಕ್ಕೆ ದ್ವಿತೀಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಅಲ್ಲದೇ, ಪರೀಕ್ಷೆಗೆ ಹಾಜರಾದ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದು, ಶೇ. 100 ರಷ್ಟು ಫಲಿತಾಂಶ ಬಂದಿದೆ.
ಈ ಪರೀಕ್ಷೆಯಲ್ಲಿ ವರ್ಷಾ ಕುಂಬಾರ ಒಟ್ಟು 600 ಅಂಕಗಳ ಪೈಕಿ 559 ಅಂಕ ಪಡೆದಿದ್ದಾಳೆ. ಈ ಮೂಲಕ ವಿಜಯಪುರ ನಗರಕ್ಕೆ ದ್ವಿತೀಯ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಅದೇ ರೀತಿ ವರ್ಷಾ ಹಿರೇಮಠ 600ಕ್ಕೆ 551 ಅಂಕ ಪಡೆದು ಶಾಲೆಗೆ ದ್ವಿತೀಯ ಮತ್ತು ಮತ್ತು ರೊಮಾ ಭೋಸಲೆ 600ಕ್ಕೆ 542 ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವರ್ಷಾ ಕುಂಬಾರ ಶಾಲೆಯಲ್ಲಿ ಗುರುಗಳು ಮಾಡಿದ ಅತ್ಯುತ್ತಮ ಬೋಧನೆ, ಸಕಲ ಸಿಬ್ಬಂದಿಯ ಸಹಕಾರ, ಶಿಸ್ತು ಬದ್ಧ ಅಧ್ಯನ ಮತ್ತು ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದೆ ಜೆಇಇ(Joint Entrance Examination) ಓದಿ ಎಂಜಿನಿಯರ್ ಪದವಿ ಪಡೆದು ಯು.ಪಿ.ಎಸ್.ಸಿ ಪರೀಕ್ಷೆ ಪಾಸಾಗಿ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸುವ ಕನಸು ಹೊಂದಿರುವುದಾಗಿ ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 30 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು, ಶೇ. 100 ರಷ್ಟು ಫಲಿತಾಂಶ ಬಂದಿದ್ದೆ. ಈ ವಿದ್ಯಾರ್ಥಿಗಳಲ್ಲಿ ನಾಲ್ಕು ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಡಿಸ್ಟಿಂಕ್ಷ್ನ್, 22 ವಿದ್ಯಾರ್ಥಿಗಳು ಶೇ. 75ಕ್ಕೂ ಹೆಚ್ಚು ಅಂಕ ಪಡೆದು ಫಸ್ಟ್ ಕ್ಲಾಸ್, ನಾಲ್ಕು ಜನ ವಿದ್ಯಾರ್ಥಿಗಳು ಶೇ. 60ಕ್ಕೂ ಹೆಚ್ಚು ಅಂಕ ಗಳಿಸಿ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಸಂಸ್ಥೆ ಮತ್ತು ಶಾಲೆಯ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ನವೀನ ಜಾರ್ಜ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

