ವಿಜಯಪುರದ ಇಬ್ರಾಹಿಂಪುರದಲ್ಲಿ ನಂದಬಸವೇಶ್ವರ ಜಾತ್ರೆಯ ವೈಭವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಇಬ್ರಾಹಿಂಪುರದಲ್ಲಿ ಬುಧವಾರ ಶ್ರೀ ನಂದಬಸವೇಶ್ವರ ಜಾತ್ರೆಯ ಅಂಗವಾಗಿ ನಂದಿಕೋಲ ಮೆರವಣಿಗೆ ವೈಭವದಿಂದ ನಡೆಯಿತು.
ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಮಾದರಿಯಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ನಡೆದ ಅಲಂಕೃತ ನಂದಿಕೋಲ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು.
ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀ ನಂದಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ನಂದಿಕೋಲ ಮೆರವಣಿಗೆ ಭಕ್ತರ ಮನೆಗಳಿಗೆ ಭೇಟಿ ನೀಡುತ್ತ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಹಾಯ್ದು ಸಂಜೆ ನಗರದ ರೇಲ್ವೆ ಸ್ಟೇಷನ್ ಮುಂದುಗಡೆ ನಡೆಯುವ ಶ್ರೀ ಪವಾಡ ಬಸವೇಶ್ವರ ದೇವರ ಭೇಟಿಗೆ ತೆರಳಿತು.
ಮೆರವಣಿಗೆಯಲ್ಲಿ ನೂರಾರು ಜನ ಸುಮಂಗಲೆಯರು ಕೈಯ್ಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ನಂದಿಕೋಲ ಹಿಂದಿದ್ದರು. ಯುವಕರು, ಗ್ರಾಮದ ಹಿರಿಯರು, ಜಾತ್ರಾ ಕಮೀಟಿಯ ಮುಖಂಡರು, ಯುವಕರು ನಂದಿಕೋಲ ಮುಂದೆ ಸಾಗುತ್ತಿದ್ದರು. ಕೆಲವು ಯುವಕರು ಬಿಳಿ ಬಣ್ಣದ ಉಡುಗೆ ತೊಟ್ಟು ತಲೆಗೆ ಕೆಂಪು ಪೇಟಾ ಸುತ್ತಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ತಮ್ಮ ಮನೆಗಳ ಬಳಿ ಸಾಗಿ ಬರುತ್ತಿದ್ದಂತೆ ಭಕ್ತರು ನಂದಿಕೋಲ ಮುಂದೆ ನೀರು ಹಾಕಿ, ಟೆಂಗಿನಕಾಯಿ ಒಡೆದು ಭಕ್ತಿಭಾವದಿಂದ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆಯುದ್ದಕ್ಕೂ ಭಕ್ತರು ನಂದಿಕೋಲ ಮೇಲೆ ಚುರಮುರಿ,ಉತ್ತತ್ತಿ, ಬಾಳೆಹಣ್ಣು ಹಾರಿಸಿದರು.
ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಸುಮಂಗಲೆಯರು ನಂದಿಕೋಲ ಬಸವಣ್ಣನಿಗೆ ಆರುತಿ ಬೆಳಗಿ ಮೆರವಣಿಗೆಗೆ ಮುಂದೆ ಬೀಳ್ಕೊಟ್ಟರು.
ಸಂಜೆ ರೇಲ್ವೆ ಸ್ಟೇಷನ್ ಬಳಿ ಇರುವ ಜಿನ್ನಿಂಗ್ ಫ್ಯಾಕ್ಟರಿ ಎದುರುಗಡೆ ಶ್ರೀ ನಂದಬಸವೇಶ್ವರ ಹಾಗೂ ಶ್ರೀ ಪವಾಡಬಸವೇಶ್ವರ ದೇವರುಗಳ ಎದುರುಗೊಳ್ಳುವ (ಭೇಟಿ) ಕಾರ್ಯಕ್ರಮದ ನಂತರ ಸವಳಿಯವರ ತೋಟದ ಬಾವಿಯಲ್ಲಿ ಅಣ್ಣ-ತಮ್ಮಂದಿರರ ಗಂಗಾ ವಿಷ ನಡೆಯಿತು.
ರಾತ್ರಿ ೮ ಕ್ಕೆ ಮರಳಿ ಅಲ್ಲಾಪೂರ ಓಣಿ, ದಿವಟಗೇರಿ ಗಲ್ಲಿ ಬಡಿಕಮಾನ, ಕಮಾನಖಾನ ಬಜಾರ ಮಾರ್ಗವಾಗಿ ಭಕ್ತರ ಮನೆಗಳಿಗೆ ಭೇಟಿ ನೀಡುತ್ತ ರಾತ್ರಿ ೧೦ಕ್ಕೆ ಇಬ್ರಾಹಿಂಪುರ ದೇವಸ್ಥಾನಕ್ಕೆ ಬಂದು ಗದ್ದುಗೆಗೊಂಡಿತು.
ಮೆರವಣಿಗೆಯಲ್ಲಿ ಶ್ರೀ ನಂದಬಸವೇಶ್ವರ ದೇವಸ್ಥಾನ ಕಮೀಟಿ ಮತ್ತು ಜಾತ್ರಾ ಕಮಿಟಿಯ ಎಲ್ಲ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬಹು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂದಿಕೋಲ ಮೆರವಣಿಗೆಯ ಮುನ್ನಾದಿನವಾದ ಮಂಗಳವಾರ ದಿನವಿಡೀ ನಿರಂತರ ಅನ್ನಸಂತರ್ಪಣೆ ನಡೆಯಿತು. ಸೋಮವಾರ ರಾತ್ರಿ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೂರು ದಿನಗಳ ಕಾಲ ನಂದಬಸವೇಶ್ವರ ಜಾತ್ರೆ ಅತ್ಯಂತ ವೈಭವದಿಂದ ನಡೆಯಿತು.

