ಧೂಳಖೇಡ ಅಂಡರ್‌ಪಾಸ್ ಸುತ್ತಮುತ್ತಲಿನ ಅತಿಕ್ರಮ ಅಂಗಡಿ ತೆರವಿಗೆ ಶನಿವಾರದವರೆಗೆ ಗಡುವು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಧೂಳಖೇಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಸಂಪರ್ಕ ರಸ್ತೆಯ ಎರಡೂ ಬದಿಯಲ್ಲಿ ನಿರ್ಮಾಣವಾಗಿರುವ ಅತಿಕ್ರಮ ಅಂಗಡಿಗಳನ್ನು ಸಂಬಂಧಪಟ್ಟವರು ಬರುವ ಡಿ.20 ಶನಿವಾರದೊಳಗೆ ತೆರವುಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಚೇತನ ರಂಗಸೊಬೆ ಸೂಚನೆ ನೀಡಿದರು.
ಬುಧವಾರ ಧೂಳಖೇಡ ಗಾ.ಪಂ.ಸಭಾ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಮೇಲೆಯೆ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು ಅಂಗಡಿ ತೆರವುಗೋಳಿಸುವ ಕುರಿತು ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿದ್ದು, ವ್ಯಾಪಾರಸ್ಥರಿಗೆ ಅಂತಿಮವಾಗಿ ಡಿ.20 ಶನಿವಾರದವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಅಂಗಡಿಗಳನ್ನು ಸ್ಥಳಾಂತರಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಸ್ತೆ ಬದಿಯಲ್ಲಿ ಇರುವ ವ್ಯಾಪಾರಸ್ಥರು, ರಸ್ತೆ ಬದಿಯಲ್ಲಿ ಕಸ ಎಸೆಯುವುದರಿಂದ ಮಾಲಿನ್ಯ ಉಂಟಾಗಿ ಕ್ರಿಮಿ–ಕೀಟಗಳ ಹೆಚ್ಚಳದಿಂದ ರೋಗಗಳು ಹರಡುವ ಸಾಧ್ಯತೆ ಇದೆ ಆದ್ದರಿಂದ ಗ್ರಾ.ಪಂ.ಯವರು ಕ್ರಮಕೈಗೋಳ್ಳಬೆಕೆಂದರು.
ಬಹುದಿನಗಳಿಂದ ಸಾರ್ವಜನಿಕರಿಗೆ ಬಸ್ ನಿಲ್ದಾಣದ ಬೇಡಿಕೆ ಇದ್ದು, ಈಗ ಗ್ರಾ.ಪಂ.ಸೂಚಿಸಿರುವ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಚೇತನ ರಂಗಸೊಬೆ ಹೇಳಿದರು.
ಧೂಳಖೇಡ ಗಾ.ಪಂ.ಸದಸ್ಯ ಸುರೇಶಗೌಡ ಪಾಟೀಲ ಮಾತನಾಡಿ ಅಂಡರ್‌ಪಾಸ್ ಪ್ರದೇಶದಲ್ಲಿ ಕಳ್ಳತನ ಹಾಗೂ ಅಕ್ರಮ ಚಟುವಟಿಕೆ ನಿಯಂತ್ರಣಕ್ಕಾಗಿ ಹೈಟೆಕ್ ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅಂಗಡಿಕಾರರು,ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಗ್ರಾ.ಪಂ.ಗುರುತಿಸಿರುವ ಸ್ಥಳದಲ್ಲಿ ಅಥವಾ ಮನೆ ಮನೆಗೆ ಬರುವ ಗ್ರಾ.ಪಂ.ಕಸ ಸಂಗ್ರಹ ವಾಹನದಲ್ಲಿಯೇ ಕಸ ಹಾಕುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ದಿಲೀಪ ಶಿವಶರಣ, ಪಿಡಿಒ ಲಾಲಾಸಾಹೇಬ ನಧಾಪ್, ಸುರೇಶ ಕಂಬಾರ, ಶಂಕ್ರೇಪ್ಪ ಭೈರಗೊಂಡ, ಮಲ್ಲಿಕಾರ್ಜುನ ನಗರೆ, ಹಣಮಂತ ಧೂಳಖೇಡಕರ, ಕಲ್ಲಪ್ಪ ಗುಮತೆ, ಗಜಾನಂದ ಬಿರಾದಾರ, ಬಂದೇನವಾಜ್ ಮುಲ್ಲಾ, ಅಮಸಿದ್ಧ ನಿಲೂರೆ, ಇಂತ್ಯಾಜ್ ನ್ಯಾಮತ, ತೌಫಿಕ್ ಕುಡ್ಲೆ, ಪರಮೇಶ್ವರ ತಳವಾರ, ರಮೇಶ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

