ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ರೈತರಿಗೆ ಬೆಳೆಹಾನಿ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ವಿಜಯಪುರ ಘಟಕ ಹಾಗೂ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷರಾದ ಸಂಗಮೇಶ ಸಿದ್ದನಗೌಡ ದಾಶ್ಯಾಳ ಮಾತನಾಡಿ, ಮುದ್ದೇಬಿಹಾಳ ತಾಲೂಕಿನ ಬಾರಿ ಮಳೆಯಿಂದಾಗಿ ರೈತರು ಬಿತ್ತಿದ ತೊಗರಿ, ಹತ್ತಿ, ಮೆಕ್ಕೆಜೋಳ, ಉಳ್ಳಾಗಡಿ, ಮೆಣಸಿನಕಾಯಿ ಮುಂತಾದ ಬೆಳೆಗಳು ಹೊಲಗಳಲ್ಲಿ ಮಳೆ ನೀರು ನಿಂತು ಹಾಳಾಗಿ ಹೋಗಿವೆ. ಇದರ ಬಗ್ಗೆ ಸಾಕಾಷ್ಟು ಬಾರಿ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಳೆ ಹಾನಿ ಆದ ಬಗ್ಗೆ ಲಿಖಿತವಾಗಿ ಹಾಗೂ ಮೌಖಿಕವಾಗಿ ತಿಳಿಸಿ ಅವರಿಗೆ ಗಮನಕ್ಕೆ ತರಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಈಗಾಗಲೇ ದಾವಣಗೆರೆ, ಯಾದಗಿರಿ, ಬಾಗಲಕೋಟ, ರಾಯಚೂರು ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಸರ್ಕಾರದಿಂದ ವಿತರಣೆಯಾಗಿರುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬೆಳೆ ಪರಿಹಾರವನ್ನು ವಿತರಿಸುವಲ್ಲಿ ತುಂಬಾ ವಿಳಂಬವಾಗಿರುತ್ತದೆ. ಬೆಳೆ ಪರಿಹಾರ ಬಾರದೇ ಇರುವ ಕಾರಣ ರೈತರು ಸಂಕಷ್ಟದಲ್ಲಿ ಇದ್ದು, ಕಾರಣ ಆದಷ್ಟು ಬೇಗ ಮುದ್ದೇಬಿಹಾಳ ತಾಲೂಕಿನ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿ.ಬಿ.ಪಾಟೀಲ, ಸಂಗಪ್ಪ ಬಾಗೇವಾಡಿ, ಮುತ್ತು ಯರಝರಿ, ಪಿಂಟು ಗೊಬ್ಬೂರ, ಶರಣು ಹೂಗಾರ, ಭೀಮರಾಜ ಗುರಗುಂಡಗಿ, ಪರಶುರಾಮ ಶಿಂಧೆ ಹಾಗೂ ನೂರಕ್ಕೂ ಹೆಚ್ಚು ರೈತರು ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

