ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ಮಂಗಳವಾರ ಶ್ರೀ ವೀರಭದ್ರದೇವರು ಹಾಗೂ ಭದ್ರಕಾಳಿ ಅಮ್ಮನವರ ಬೆಳ್ಳಿ ರಥವನ್ನು ನೂರಾರು ಮಹಿಳೆಯರು ಎಳೆಯುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ವಿಶಿಷ್ಟವಾಗಿ ಮಹಿಳೆಯರೆ ರಥವನ್ನು ಎಳೆಯುವುದು ಇಲ್ಲಿನ ವಾಡಿಕೆ.
ಸಾರಂಗಮಠದ ಪೂಜ್ಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಇಲ್ಲಿನ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಭಕ್ತರ ಇಚ್ಚೇಷ್ಟೇಗಳ ಈಡೇರಿಕೆಗಾಗಿ ಕಳೆದ ಏಳು ವರ್ಷಗಳಿಂದ ಮಹಿಳೆಯರೇ ಈ ರಥವನ್ನು ಎಳೆಯುವ ಸಂಪ್ರದಾಯಕ್ಕೆ ವಿಶೇಷ ಮನ್ನಣೆ ಕೊಟ್ಟಿರುವುದು ಇತಿಹಾಸ. ರಥದ ಬೆಳ್ಳಿ ಪೀಠದಲ್ಲಿ ರಾರಾಜಿಸುತ್ತಿದ್ದ ವೀರಭದ್ರದೇವರು ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳೊಂದಿಗೆ ಸಾಗಿದ ರಥ ಮತ್ತು ಬೆಳ್ಳಿ ಪಲ್ಲಕ್ಕಿ, ನಗರದ ಸಾರಂಗಮಠದಿಂದ ಆರಂಭಗೊಂಡು, ಸ್ವಾಮಿ ವಿವೇಕಾನಂದ ವೃತ್ತ, ತೋಂಟದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ, ಕಾಯಿಪಲ್ಲೆ ಮಾರ್ಕೆಟ್ ಬಳಿ ಇರುವ ಗಚ್ಚಿನಮಠದ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆಯ ಅವರಣದಲ್ಲಿರುವ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ ತೆರಳಿತು.
ನಗರದುದ್ದಕ್ಕೂ ಉಡಪಿಯ ಸ್ಕಂದ ಚೆಂಡೆ ಬಳಗದವರಿಂದ ನಡೆದ ಕುಣಿತ ಜನಮನಸೆಳೆಯಿತು. ಪುರವಂತಿಕೆ, ಜಯ ಘೋಷಗಳೊಂದಿಗೆ ಬೆಳ್ಳಿ ರಥ ಹಾಗೂ ಪಲ್ಲಕ್ಕಿ ವಿಜೃಂಭಣೆಯಿಂದ ಮೂಡಿ ಬಂದಿತು. ನಂತರ ದೇವಸ್ಥಾನದ ಬೆಳ್ಳಿ ಪಲ್ಲಕ್ಕಿಯೊಂದಿಗೆ ಅಗ್ನಿ ಪ್ರವೇಶ ಮಾಡಲಾಯಿತು. ರಥೋತ್ಸವದಲ್ಲಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪಾಳ ಮಠದ ಡಾ.ಗುರುಮೂರ್ತಿ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಕಲಕೇರಿ ಪಂಚರಂಗ ಸಂಸ್ಥಾನಮಠದ ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಅರುಣ ಶಹಾಪೂರ ಸೇರಿದಂತೆ ತಾಲೂಕಿನ ವಿವಿಧ ಮಠದ ಶ್ರೀಗಳು, ಅಶೋಕ ವಾರದ, ದಯಾನಂದಗೌಡ ಬಿರಾದಾರ, ಡಾ.ರವಿ ಗೋಲಾ, ಎಸ್.ಎಂ.ಬಿರಾದಾರ, ಡಾ.ಶರಣಬಸವ ಜೋಗುರ, ಚನ್ನಬಸವ ಕತ್ತಿ, ವಿರೇಶ ಜೋಗುರ, ಶಿವಕುಮಾರ ಜೋಗುರ, ಶ್ರೀಶೈಲ ನಂದಿಕೋಲ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಮಹಿಳಾ ಭಕ್ತ ವರ್ಗ, ತಾಲೂಕಿನ ಶ್ರೀಮಠದ ಭಕ್ತರು ಜಿ.ಪಿ.ಪೋರವಾಲ ಮತ್ತು ಆರ್.ಡಿ.ಪಾಟೀಲ ಕಾಲೇಜಿನ ಎನ್.ಸಿ.ಸಿ, ಎನ್‌ಎಸ್‌ಎಸ್ ಹಾಗೂ ಸ್ಕೌರ್ಟ್ಸ ಮತ್ತರು ಗೈಡ್ಸ್ ವಿದ್ಯಾರ್ಥಿಗಳು ಇದ್ದರು.

