ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹಕ್ಕೊತ್ತಾಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರಕ್ಕೆ ವಿಜಯಪುರ ಜಿಲ್ಲೆ ವಿಭಜನೆ ಮಾಡುವ ವಿಚಾರವಿದ್ದರೆ ಸಿಂದಗಿಯನ್ನು ಜಿಲ್ಲೆ ಮಾಡುವ ಗಮನವನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಲಿ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹಕ್ಕೊತ್ತಾಯಿಸಿದರು.
ಪಟ್ಟಣದ ವಿದ್ಯಾ ನಗರದ ನಿವಾಸದಲ್ಲಿ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು, ಕಳೆದ ಎರಡುವರೆ ವರ್ಷದಲ್ಲಿ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆಯಲ್ಲಿ ೬೦ಸಾವಿರಕ್ಕಿಂತಲೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರ ಪರಿಣಾಮವಾಗಿ ಸರಕಾರಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಸರಕಾರಿ ಶಾಲೆಯಲ್ಲಿಯೇ ಅತೀ ದೊಡ್ಡ ಸಂಖ್ಯೆಯಲ್ಲಿ ಓದುವ ಪಠ್ಯಕ್ರಮವಿದೆ. ಆದರೆ ಇಂದು ಅಗಾಧವಾದ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಕರ್ನಾಟಕ ಸರಕಾರ ಮ್ಯಾಗನೈಟ್ ಶಾಲೆಗಳು, ಕೆಪಿಎಸ್ ಶಾಲೆಗಳನ್ನಾಗಿ ಮಾಡುವ ಮೂಲಕ ಶಾಲೆಗಳನ್ನು ಮುಚ್ಚುವ ವ್ಯವಸ್ಥೆ ಸರಕಾರ ಮಾಡುತ್ತದೆ ಎಂದು ಹರಿಹಾಯ್ದರು.
ಸರಕಾರ ಬಂದ ಎರಡುವರೆ ವರ್ಷಗಳ ಅವಧಿಯಲ್ಲಿ ಸರಕಾರಿ ಶಾಲೆಗಳಿಗೆ ಒಂದೇ ಒಂದು ಕೊಠಡಿಯನ್ನು ನಿರ್ಮಿಸಿ ಕೊಡುವುದಾಗಲಿ, ಹಳೆಯ ಕಟ್ಟಡ ದುರಸ್ತಿ ಮಾಡುವುದಾಗಲಿ ಆಗಿಲ್ಲ. ಈ ಪರಿಸ್ಥಿತಿಯ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲದಿರುವುದು ವಿಷಾಧನೀಯ. ಕಿತ್ತೂರ ಕರ್ನಾಟಕದ ಶಾಲೆಗಳು ತ್ರಿಶಂಕು ಸ್ಥಿತಿಯಲ್ಲಿವೆ. ಒದಗಿಸಿರುವ ಮೂಲಭೂತ ಸೌಲಭ್ಯಗಳು ನೆಲ ಕಚ್ಚಿದ್ದು, ಶಿಕ್ಷಕರ ಭರ್ತಿಯೂ ಕುಸಿದಿದೆ. ಮಾನ್ಯತಾ ನವೀಕರಣದ ಹೆಸರಿನಲ್ಲಿ ಪ್ರತಿವರ್ಷ ೫೦ಸಾವಿರದಿಂದ ೨ಲಕ್ಷದವರೆಗೆ ಹಣ ಕೊಡದಿದ್ದರೆ ನವೀಕರಣವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಇದ್ದು, ಅನುದಾನಿತ ಖಾಸಗಿ ಶಾಲೆಯವರು ಶಾಲೆ ನಡೆಸಲು ಹಿಂಜರಿಯುವ ಮಟ್ಟಕ್ಕೆ ಸರಕಾರ ತಂದು ನಿಲ್ಲಿಸಿದೆ. ೨೦೦೬ರಲ್ಲಿ ಡಿ.ಎಂ.ನಂಜುಡಪ್ಪ ಅವಧಿಯಲ್ಲಿ ಜೋಳಿಗೆ ಹಾಕಿ ಪ್ರಾರಂಭಿಸಿದ ಶಾಲೆಗಳು ದಾನಿಗಳು ಕೊಟ್ಟ ಜಮೀನಿನಲ್ಲಿ ಪ್ರಾರಂಭವಾಗಿ ಕನಿಷ್ಟ ೨೫-೩೯ ವರ್ಷಗಳಾಗಿದ್ದು, ಪ್ರಸ್ತುತ ಆ ಜಾಗೆಯ ಎನ್‌ಎ ಆರ್ಡ್ರ ಕಾಫಿ ಕೊಡದಿದ್ದರೆ ಶಾಲೆಗಳನ್ನು ಬಂದು ಮಾಡುತ್ತೇವೆ ಹೆದರಿಸುವ ಸರಕಾರ ಇರುವ ಸರಕಾರಿ ಶಾಲೆಗಳಿಗೆ ಅನುದಾನ ಕೊಡದೆ ಶಿಕ್ಷಕರನ್ನು ಕೊಡದೆ ಸರಕಾರಿ ಶಾಲೆಗಳಿಗೆ ಮಕ್ಕಳು ಬರದಂತೆ ವ್ಯವಸ್ಥಿತ ಸಂಚು ನಡೆಸುತ್ತಿದೆ ಎನ್ನುವ ಅನುಮಾನ ಬರುತ್ತಿದೆ. ೧೦೯೯೫ರ ನಂತರ ಶಾಲೆಗಳಿಗೆ ಅನುದಾನವಿಲ್ಲ. ಕನಿಷ್ಠ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ಅನುದಾನಕ್ಕೊಳಪಡದೆ ನಿವೃತ್ತಿಯಾಗುವ ಹಂತ ತಪುಪಿದ್ದು ದುರಂತ.
ಒಟ್ಟಾರೆ ಶಿಕ್ಷಣ ಕ್ಷೇತ್ರದ ಬಗ್ಗೆ ಸರಕಾರದ ಬದ್ಧತೆ ಏನು ಎಂಬ ಪ್ರಶ್ನೆಗೆ ಉತ್ತರಿಸುವ ಜೊತೆಗೆ ಕಿತ್ತೂರು ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಸಮಗ್ರ ಚರ್ಚೆ ಸರಕಾರಿ ಹಂತದಲ್ಲಾಗಬೇಕು. ೧೦೦ಎಕರೆ ಜಾಗವಿರುವ ೧೦೦೦ ಹಾಸಿಗೆಯುಳ್ಳ ಸರಕಾರಿ ಆಸ್ಪತ್ರೆಗಳಿಗೆ ಏಮ್ಸ್ ಮಾನ್ಯತೆ ಕೊಟ್ಟ ಉದಾಹರಣೆಗಳಿದ್ದು, ೧೫೩ಎಕರೆ ಸ್ಥಳಾವಕಾಶ ಹೊಂದಿ ೧೨೫೦ ಹಾಸಿಗೆಯುಳ್ಳ ವಿಜಯಪುರ ಜಿಲ್ಲೆಯ ವಿಶಾಲ ಸರಕಾರಿ ಆಸ್ಪತ್ರೆಗೆ ಏಮ್ಸ್ ಮಾನ್ಯತೆ ನಿಡದಿರುವುದು ಸರಕಾರದ ಮಲತಾಯಿ ಧೋರಣೆಯಾಗಿದೆ. ಕೇಂದ್ರದ ಮಾಜಿ ಆರೋಗ್ಯ ಸಚಿವರು ವಿಜಯಪುರ ಜಿಲ್ಲೆಗೆ ಏಮ್ಸ್ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಸರಕಾರಕ್ಕೆ ಮನವಿ ಮಾಡಿದ್ದರು. ರಾಯಚೂರಿಗೆ ಹೋದಾಗ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ವಾಗ್ದಾನ ಮಾಡುವ ಸಿಎಂ ಸಿದ್ದರಾಮಯ್ಯ ಏಮ್ಸ್ ಅರ್ಹತೆಗೆ ಎಲ್ಲ ಅನುಕೂಲವಿದ್ದ ವಿಜಯಪುರ ಜಿಲ್ಲೆಗೆ ನೀಡಲು ಹಿಂಜರೆಯುತ್ತಿರುವ ಕಾರಣವಾದರು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ಧರಾಮ ಆನಗೊಂಡ, ಸಾಯಬಣ್ಣ ದೇವರಮನಿ, ರಾಜು ಪಾಟೀಲ, ಮಲ್ಲು ಪೂಜಾರಿ, ಶಿವಾನಂದ ರೋಡಗಿ ಸೇರಿದಂತೆ ಅನೇಕರಿದ್ದರು.
” ವಿಜಯಪುರ ನಗರಕ್ಕೆ ಒಂದೊಮ್ಮೆ ವೈದ್ಯಕೀಯ ಮಹಾವಿದ್ಯಾಲಯವಾಗದೆ ಇದ್ದರೆ ಸಿಂದಗಿ ತಾಲೂಕಿಗೆ ಪ್ರಥಮ ಆಧ್ಯತೆ ನೀಡಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸಿಂದಗಿ ಶಾಸಕರು ಬರುವ ಬೆಳಗಾವದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾವನೆ ಮಾಡಿ ಮಂಜೂರು ತರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.”
– ಅರುಣ ಶಹಾಪೂರ
ಮಾಜಿ ಎಂಎಲ್ಸಿ

