ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಮಹಾಂತ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾನವೀಯತೆ ಆದರ್ಶ ಮೌಲ್ಯಗಳು ಬೆಳೆದು ಬರಬೇಕು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮ ಎಂದು ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.
ಸಿಂದಗಿ ಸಾರಂಗಮಠ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಇವರ ಸಹಯೋಗದೊಂದಿಗೆ ಶ್ರೀ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥ ಕರ್ತೃಗಳಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿಯ ಶ್ರೀ ಶಿವಯೋಗಿ ಶಿವಾಚಾರ್ಯ ಸ್ಮರಣಾರ್ಥ ಸಿಂದಗಿಯ ಸಾರಂಗಮಠದ ಲಿಂ.ಚನ್ನವೀರ ಮಹಾಸ್ವಾಮಿಗಳ ೧೩೨ನೇ ಜಯಂತ್ಯುತ್ಸವದ ನಿಮಿತ್ತ ಚೆನ್ನವೀರ ಮಹಾಸ್ವಾಮೀಜಿ ಪ್ರತಿಷ್ಠಾನ ಕೊಡಮಾಡುವ ಶಿವಯೋಗಿ ಶಿವಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ವೇದಾಂತಗಳ ತವರುರು. ಸಿಂದಗಿ ಶ್ರೀಮಠವು ಮತಿಗೆ ಗ್ರಂಥ, ಮತಕ್ಕೆ ಮಂತ್ರವನ್ನು ಕೊಟ್ಟಂತ ಮಠವಿದು. ಇಂತಹ ಮಹಾಮಠದಲ್ಲಿ ಶಿವಯೋಗಿ ಶಿವಾಚಾರ್ಯರ ಹೆಸರಿನ ಮೇಲೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಬೇಕಾಗಿದ್ದು ಧರ್ಮದ ಆಚರಣೆ ಎಂದರು.
ಸನ್ಮಾನ ಸ್ವೀಕರಿಸಿದ ಹ.ಮ.ಪೂಜಾರ ಮಾತನಾಡಿ, ಶಿಕ್ಷಕ ಮಗುವಿನ ವಿಕಸನಗೊಳಿಸಬೇಕು. ಶಿಕ್ಷಕ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ಸೃಜನ ಶೀಲತೆಯನ್ನು ಬೆಳೆಸಬೇಕು. ಒಬ್ಬ ಶಿಕ್ಷಕ ಪ್ರತಿನಿತ್ಯ ಓದುವ ಮೂಲಕ ಹೊಸ ವಿಚಾರಗಳನ್ನು ಮಕ್ಕಳಲ್ಲಿ ಬೆಳೆಯುವ ಹಾಗೆ ಪಾಠ ಬೋಧನೆ ಮಾಡಬೇಕು. ವಿಜ್ಞಾನ, ತಂತ್ರಜ್ಞಾನ ಚರ್ಚಾಕೂಟಗಳನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಕರು ಹೇಗೆ ಪಾಠ ಬೋಧನೆ ಮಾಡಬೇಕು ಎನ್ನುವ ಪುಸ್ತಕವನ್ನು ಬರೆಯುವ ಆಸೆಯನ್ನು ಹೊಂದಿದ್ದೇನೆ. ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ನನ್ನಲ್ಲಿ ಮೂಡಿಸಿದೆ ಎಂದರು.
ಕೆರೂರು ಚರಂತಿಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ರಚಿಸಿದ ವೀರಶೈವ ಪರಂಪರೆ ಗ್ರಂಥದ ಕುರಿತು ಮಾತನಾಡಿದ ಅವರು, ಮೊಬೈಲ್ ಬಂದ ಮೇಲೆ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವೀರಶೈವ ಪರಂಪರೆಯನ್ನು ಇಂದು ಎಲ್ಲರೂ ಮರೆಯುತ್ತಿದ್ದಾರೆ. ಅದನ್ನು ತಿಳಿದುಕೊಳ್ಳುವ ದಿಸೆಯಲ್ಲಿ ವೀರಶೈವ ಪರಂಪರೆಯ ಕುರಿತಾಗಿ ಕಿರು ಹೊತ್ತಿಗೆಯನ್ನು ಹೊರ ತರಲಾಗಿದೆ. ಇದರಲ್ಲಿ ೧೨ನೆಯ ಶತಮಾನದಲ್ಲಿರುವ ಬಸವಾದಿ ಶರಣರ ಮತ್ತು ಪಂಚಾರ್ಯರಿಗೂ ಅವಿನಾಭಾವ ಸಂಬಂಧವಿರುವುದನ್ನು ತಿಳಿಸಲಾಗಿದೆ. ಎಲ್ಲರೂ ಇದನ್ನು ಓದಿ ತಿಳಿದುಕೊಳ್ಳಬೇಕು. ವೀರಶೈವ ಮತ್ತು ಲಿಂಗಾಯತ ಎಂಬುದು ಒಂದೆಯಾಗಿದೆ. ಲಿಂಗವನ್ನು ಧರಿಸಿದ ಪ್ರತಿಯೊಬ್ಬರು ಲಿಂಗಾಯತರು ಎಂದರು.
ಈ ವೇಳೆ ಹುಕ್ಕೇರಿ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶ್ರೀಗಳು, ಕೊಟ್ಟೂರು ಶ್ರೀಮಠ ಡಾ.ಸಿದ್ದಲಿಂಗ ಶ್ರೀಗಳು ಮಾತನಾಡಿದರು. ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಪುರಾಣಿಕರಾದ ಹರನಾಳದ ಸಂಗನಬಸವ ಮಹಾಸ್ವಾಮಿಗಳು, ಶಿವಕುಮಾರ ಶ್ರೀಗಳು, ಶಾಸಕ ಅಶೋಕ ಮನಗೂಳಿ, ಸಂಸ್ಥೆಯ ನಿರ್ದೇಶಕರಾದ ಅಶೋಕ ವಾರದ, ಅಶೋಕ ಮಸಳಿ, ವಿವೇಕಾನಂದ ಸಾಲಿಮಠ, ಅಶೋಕ ಬೂದಿಹಾಳ, ವಿ.ಡಿ. ವಸ್ತ್ರದ, ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಇದ್ದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಪಡಶೆಟ್ಟಿ. ಗದಗದ ವಿರೇಶ್ವರ ಪುಣ್ಯಾಶ್ರಮದ ಹುಚ್ಚಯ್ಯ ಹವಾಯಿಗಳು ಹಿರೇಮಠ, ತಬಲಾ ವಾದಕ ಸಿದ್ಧರಾಮ ಬ್ಯಾಕೋಡ ಸೇರಿದಂತೆ ಶ್ರೀಮಠದ ಭಕ್ತರು, ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಪೂಜಾ ಹಿರೇಮಠ ಪ್ರಾರ್ಥಿಸಿದರು. ಡಾ.ಶರಣಬಸವ ಜೋಗುರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ರವಿ ಗೋಲಾ ನಿರೂಪಿಸಿ ವಂದಿಸಿದರು.

