ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವಿಭಾಗೀಯ ಸಹ ನಿರ್ದೇಶಕಿ ಪುಷ್ಪಾ ಎಚ್.ಆರ್ ಸೋಮವಾರ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಮೂಲ ಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.
ದಿಢೀರ್ ಬೇಟಿ ನೀಡಿದ ತತ್‌ಕ್ಷಣ ಮೊದಲು ವಾರ್ಡ್ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಆಸ್ಪತ್ರೆಯ ಕುರಿತಾಗಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿದರು.
ಬಳಿಕ ಸಿಬ್ಬಂದಿಯ ಹಾಜರಾತಿ ಪುಸ್ತಕ ಸೇರಿದಂತೆ ಇನ್ನೀತರ ವಿಷಯಗಳನ್ನು ಚರ್ಚಿಸಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಿರಬೇಕು ಎಂದು ಸೂಚಿಸಿದರು. ಆಸ್ಪತ್ರೆಯ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಆ ಸಮಯದಲ್ಲಿ ಆಸ್ಪತ್ರೆ ದುರಸ್ತಿ ಕಾರ್ಯ ನಡೆದಿತ್ತು. ಅಂದಿಗೂ ಇಂದಿಗೂ ಸ್ವಲ್ಪ ಪ್ರಮಾಣದಲ್ಲಿ ಆಸ್ಪತ್ರೆ ಸುಧಾರಣೆಯಾಗಿದೆ. ಸಿಂದಗಿ ಆಸ್ಪತ್ರೆಯ ವೈದ್ಯರ ವರ್ಗಾವಣೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರು, ಈ ಕುರಿತಾಗಿ ನನಗೆ ಮಾಹಿತಿ ಇಲ್ಲ. ಸರಕಾರದ ಯಾವುದೇ ಆದೇಶ ಇನ್ನು ನಮಗೆ ಬಂದಿಲ್ಲ. ಬಂದ ಬಳಿಕ ಇದರ ಕರಿತಾಗಿ ಜಿಲ್ಲಾ ವೈದ್ಯಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಕ್ಯಗೊಳ್ಳಲಾಗುವುದು.
ನಗರದಲ್ಲಿರುವ ಅನಧಿಕೃತ ಆಸ್ಪತ್ರೆ, ಪ್ರಯೋಗಾಲಯ ಮತ್ತು ನಕಲಿ ವೈದ್ಯರ ವಿಚಾರವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡುವ ಕುರಿತು ಆದೇಶ ಮಾಡಲಾಗುವುದು. ಇನ್ನೂ ಮುಂದೆ ತಾಲೂಕು ಸಾರ್ವಜನಿಕ ಆಸ್ಪತ್ರೆಯು ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡುತ್ತೇನೆ. ಜಾಗೃತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಇಲಾಖೆಯ ವತಿಯಿಂದ ಆದೇಶ ಹೊರಡಿಸಲಾಗುವುದು ಎಂದರು.
“ಯಾರು ನಕಲಿ ವೈದ್ಯರಿದ್ದಾರೆ ಅವರ ಮೇಲೆ ದಾಳಿ ಮಾಡಿ ಅವರ ದಾಖಲೆಗಳನ್ನು ಪರಿಶೀಲಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸುತ್ತೇನೆ. ಅದರ ಕುರಿತಾಗಿ ಕ್ರಮಕೈಗೊಂಡ ವರದಿ ಸಲ್ಲಿಸಲು ತಿಳಿಸಲಾಗುವುದು.”
– ಪುಷ್ಪಾ ಎಚ್.ಆರ್
ಆ.ಕು.ಕ.ಸೇ ವಿಭಾಗೀಯ ಸಹನಿರ್ದೇಶಕಿ:

