ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದಲ್ಲಿ ಬಡ ಮಕ್ಕಳಿಗಾಗಿ ನಿರ್ಮಾಣವಾಗುತ್ತಿರುವ ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಮಹಾದ್ವಾರದ ಪ್ರಥಮ ಹೊಸ್ತಿಲ ಪೂಜಾ ಕಾರ್ಯಕ್ರಮ ನಿಮಿತ್ಯ ಐದು ದಿನಗಳ ಕಾಲ ಹೆಸರಾಂತ ಪ್ರವಚನಕಾರರಿಂದ ಪ್ರವಚನ ಕಾರ್ಯಕ್ರಮ ಹಾಗೂ ೫೦೦೦ ಮುತ್ತೈದೆಯರಿಗೆ ಉಡಿ ತುಂಬುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ತಿಳಿಸಿದರು.
ಅವರು ಸೋಮವಾರ ಇಂಡಿ ಪಟ್ಟಣದ ಶ್ರೀಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಡಿಸೆಂಬರ್ ೫ ರಿಂದ ಹತ್ತರವರೆಗೆ ಸಾಯಂಕಾಲ ೬ ರಿಂದ ಪ್ರವಚನ ಕಾರ್ಯಕ್ರಮವಿದ್ದು, ಡಿಸೆಂಬರ್ ೫ರಂದು ಕಾತ್ರಾಳ-ಬಾಲಗಾಂವದ ಅಮೃತಾನಂದ ಮಹಾಸ್ವಾಮಿಗಳಿಂದ, ಡಿಸೆಂಬರ್ ೬ ರಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಅವರಿಂದ, ಡಿಸೆಂಬರ್ ೭ರಂದು ಕಡಕೋಳದ ಮಡಿವಾಳೇಶ್ವರ ಮಠದ ರುದ್ರಮನಿ ಶಿವಾಚಾರ್ಯರಿಂದ, ಡಿಸೆಂಬರ್ ೮ರಂದು ಚೌಡಾಪುರ ಚಿನ್ಮಯಗಿರಿ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರಿಂದ, ಡಿಸೆಂಬರ್ ೯ ರಂದು ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗ ಶಿವಾಚಾರ್ಯರಿಂದ ಪ್ರವಚನ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ೧೦ ರಂದು ಸಾಲಿಗ್ರಾಮದ ಶಿಲೆಯಲ್ಲಿ ನಿರ್ಮಾಣವಾಗುತ್ತಿರುವ ಮಹಾದ್ವಾರದ ಪೂಜಾ ಸಮಾರಂಭ ಹಾಗೂ ಧರ್ಮಸಭೆ, ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವಿದೆ. ಅಂದಿನ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಜಗದ್ಗುರು ಡಾ. ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನೊಣವಿನಕೆರೆಯ ಡಾ. ಕರಿವೃಷಭ ದೇಶಿ ಕೇಂದ್ರ ಶಿವಯೋಗಿಗಳು, ಜಿಡಗಾ ಮಠದ ಮುರುಘರಾಜೇಂದ್ರ ಮಹಾಶಿವಯೋಗಿಗಳು, ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯಗಳ ರಾಜ್ಯ ಸಚಿವ ವಿ. ಸೋಮಣ್ಣನವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರವರು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ಕೃಷಿ ಮಾರುಕಟ್ಟೆ ಹಾಗೂ ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಿಕಟ ಪೂರ್ವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಇಂಡಿ ಭಾಜಪ ಮುಖಂಡ ಕಾಸೂಗೌಡ ಬಿರಾದಾರ, ಇಂಡಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ವಿವಿಧ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಭಕ್ತ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು.
ಜೈನಾಪುರದ ರೇಣುಕ ಶಿವಾಚಾರ್ಯರು, ಶಾಂತೇಶ್ವರ ಟ್ರಸ್ಟ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಅನೀಲಪ್ರಸಾದ ಏಳಗಿ ಮಾತನಾಡಿ, ಶಿರಶ್ಯಾಡದ ಮುರುಘೇಂದ್ರ ಶಿವಾಚಾರ್ಯರು ಇಂಡಿ ನಗರದಲ್ಲಿ ಬಡ ಮಕ್ಕಳೀಗಾಗಿ ದೊಡ್ಡ ಪ್ರಮಾಣದ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಕಟ್ಟಡ ನಿರ್ಮಾಣವಾದ ನಂತರ ಪ್ರತೀ ದಿನ ೨೦೦ ಮಕ್ಕಳಿಗೆ ದಾಸೋಹ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಕಷ್ಟು ಜನ ದಾನಿಗಳು ಈ ಕಟ್ಟಡಕ್ಕೆ ದೇಣಿಗೆ ನೀಡುತ್ತಿದ್ದಾರೆ. ಹೀಗಾಗಿ ಈಗಾಗಲೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತ ಬಳಗ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲು ಬುರಕುಲೆ, ಬಾಬು ಆರ್, ಹಂಜಗಿ ಸೇರಿದಂತೆ ಇನ್ನಿತರರು ಇದ್ದರು

