ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾ, ತಾಲೂಕು ಘಟಕವು ಶಿಕ್ಷಕರ ದಿನಾಚರಣೆ ಹಾಗೂ ದಸರಾ ಹಬ್ಬದಂಗವಾಗಿ ಎರಡು ದಿನಗಳ ಕಾಲ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಹಾಗೂ ಥ್ರೋಬಾಲ್ ಟೂರ್ನಾಮೆಂಟ್ ನಲ್ಲಿ ಭಾನುವಾರ ಸಂಜೆ ಜರುಗಿದ ರೋಚಕ, ಕುತೂಹಲ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಬಸವನಬಾಗೇವಾಡಿ ಬ್ಲಾಸ್ಟರ್ ತಂಡದ ವಿರುದ್ಧ ಮನಗೂಳಿ ಮಹಾರಾಜ ತಂಡವು ಜಯಸಾಧಿಸುವ ಎರಡನೇ ಬಾರಿಗೆ ಟೀಚರ್ಸ್ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು.
ಇದೇ ಪ್ರಥಮ ಬಾರಿಗೆ ವೇದಿಕೆಯು ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಹಮ್ಮಿಕೊಂಡಿದ್ದ ಥ್ರೋಬಾಲ್ ಪಂದ್ಯದಲ್ಲಿ ಅಂತಿಮವಾಗಿ ನಡೆದ ಸ್ಪರ್ಧೆಯಲ್ಲಿ ಹೂವಿನಹಿಪ್ಪರಗಿ ತಂಡವನ್ನು ಕೊಲ್ಹಾರ ತಂಡ ಸೋಲಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಸ್ಟ್ ಮ್ಯಾನ್ ಮ್ಯಾಚ್, ಮ್ಯಾನ್ ಆಫ್ ಸಿರೀಜ್, ಫೈನಲ್ ಮ್ಯಾನ್ ಆಫ್ ಸಿರೀಜ್ ಗೆ ಮೋಹನ ಭಾಜನರಾದರೆ, ಬೆಸ್ಟ್ ಪೀಲ್ಡರ್, ಬೆಸ್ಟ್ ಬೌಲರ್ ಯಾಗಿ ಸಿ.ಬಿ.ಕೆಂಚಗೌಡರ, ಬೆಸ್ಟ್ ವಿಕೆಟ್ ಕೀಪರ್ ಯಾಗಿ ರಿಯಾಜ್ ಪಿಂಜಾರ ಹೊಮ್ಮಿದರು. ಇವರಿಗೆ ವೈಯಕ್ತಿಕ ಟ್ರೋಫಿಯನ್ನು ಶ್ರೀಗಳು ವಿತರಿಸಿದರು. ಸಾಂಗ್ಲಿಯಿಂದ ಆಗಮಿಸಿದ್ದ ಅಂಪೈಯರ್ ಸಿದ್ದು ಹೂಗಾರ ಅವರು ತಮ್ಮದೇ ವಿಶೇಷ ಶೈಲಿಯಲ್ಲಿ ನೃತ್ಯ ಮಾಡುತ್ತಾ ತೀರ್ಪು ನೀಡುವುದು ವೀಕ್ಷಕರ ಗಮನ ಸೆಳೆಯಿತು.
ಚಾಂಪಿಯನ್ ಟ್ರೋಫಿ ವಿತರಣಾ ಸಮಾರಂಭ ಸಾನಿಧ್ಯ ವಹಿಸಿದ್ದ ಜಮಖಂಡಿ ಓಲೇಮಠದ ಆನಂದದೇವರು ಮಾತನಾಡಿ, ಕ್ರೀಡೆಯಲ್ಲಿ ಮನುಷ್ಯನ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ. ನಮ್ಮ ಆರೋಗ್ಯವು ಗಟ್ಟಿಯಾಗಿ ಇರಬೇಕಾದರೆ ಪ್ರತಿಯೊಬ್ಬರೂ ಯಾವದಾದರೂ ಕ್ರೀಡೆಯಲ್ಲಿ ತೊಡಗುವಂತಾಗಬೇಕು ಎಂದರು.
ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರು ತಮ್ಮ ಒತ್ತಡದ ಕಾರ್ಯದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.ಈ ದಿಶೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆಯು ಇಂತಹ ಟೂರ್ನಾಮೆಂಟ್ ಆಯೋಜನೆ ಮಾಡುವ ಮೂಲಕ ಅವರಿಗೆ ಚೈತನ್ಯ ತುಂಬುವ ಕಾರ್ಯ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ ಮಾತನಾಡಿ, ವೇದಿಕೆಯು ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೆ ಸರ್ವ ಶಿಕ್ಷಕ ಬಾಂಧವರ ಸಹಕಾರ ಮರೆಯುವಂತಿಲ್ಲ ಎಂದರು.
ಯುವ ಧುರೀಣ ಸಂಗಮೇಶ ಓಲೇಕಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಗೊಳಸಂಗಿ, ಅನಿಲ ಅಗರವಾಲ, ರವಿ ರಾಠೋಡ, ಬಸವರಾಜ ಕೋಟಿ, ಶೇಖರ ಗೊಳಸಂಗಿ,ಎಂ.ಜಿ.ಆದಿಗೊಂಡ, ಸುರೇಶಗೌಡ ಪಾಟೀಲ, ರವಿ ನಿಡೋಣಿ, ಶಿಕ್ಷಕರ ಸಂಘಟನೆಯ ಹೊನ್ನಪ್ಪ ಗೊಳಸಂಗಿ, ಎಚ್.ಬಿ.ಬಾರಿಕಾಯಿ, ಎಂ.ಎನ್.ಯಾಳವಾರ, ಎಂ.ಎಸ್.ಅವಟಿ, ಸುರೇಶ ಬಿರಾದಾರ, ಅಶೋಕ ಗಿಡ್ಡಪ್ಪಗೋಳ, ಸೋಮು ಬಿರಾದಾರ, ಎಸ್.ಎಚ್.ಗಡೇದ, ಎಂ.ಎಂ.ಮುಲ್ಲಾ, ಸುನೀಲಗೌಡ ಬಿರಾದಾರ, ಸಿದ್ದು ಅವಜಿ, ಸಿದ್ದಲಿಂಗ ಬಾಗೇವಾಡಿ ಇತರರು ಇದ್ದರು. ಬಸವರಾಜ ಚಿಂಚೋಳಿ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸರಿಗಮಪ ಕಲಾವಿದರಾದ ಚೆನ್ನಪ್ಪ, ಪೂಜಾ ವಿಭೂತಿಪುರಮಠ ಅವರು ವಿವಿಧ ಗೀತೆಗಳನ್ನು ಪ್ರಸ್ತುತ ಪಡಿಸಿದರು.

