ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನಾಗರಾಳಹುಲಿ ಗ್ರಾಮದಲ್ಲಿರುವ ಜಮೀನು ಸರ್ವೆ ನಂ.65 ಕ್ಕೆ ಗ್ರಾಮಸ್ಥರು ಸೋಮವಾರ ತಹಸೀಲ್ದಾರರಿಗೆ ತಕರಾರು ಅರ್ಜಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಕಾಶ ಜಂಬಲದಿನ್ನಿ, ಸಿದ್ದಪ್ಪ ಸಾಸನೂರ, ಶಂಕ್ರೆಪ್ಪ ಹುಲಿಬೆಂಚಿ, ಬಸಣ್ಣ ಬ್ಯಾಳಿ ಮಾತನಾಡಿ, ಗ್ರಾಮದ ಸರ್ವೆ ನಂ.65 ರಲ್ಲಿ ನಾಲ್ಕು ಎಕರೆ 7 ಗುಂಟೆ ಸರ್ಕಾರಿ ಜಮೀನು ಇದೆ. ಈ ಜಮೀನಿನಲ್ಲಿ ಈಗಾಗಲೇ ಒಂದು ಸರ್ಕಾರಿ ಬಾವಿ ಇದೆ.ನಾಗರಾಳಹುಲಿ ಗ್ರಾಮದಿಂದ ವಡವಡಗಿ ಗ್ರಾಮಕ್ಕೆ ಹೋಗುವ ಸರ್ಕಾರಿ ರಸ್ತೆ ಸಹ ಇದೆ. ಅಲ್ಲದೇ ಈ ಜಮೀನಿನಲ್ಲಿ ಒಂದು ಧೋಬಿಘಾಟ ಹಾಗೂ ಗ್ರಾಮದೇವತೆಯ ಗಂಗಸ್ಥಳದ ಪಾದಗಟ್ಟಿ ಸಹ ಇದೆ. ಇದನ್ನು ಹೊರತು ಪಡಿಸಿದಂತೆ ಉಳಿದ ಅಂದಾಜು ಎರಡು ಎಕರೆ ಕ್ಷೇತ್ರದಲ್ಲಿ ಗ್ರಾಮದಲ್ಲಿ ಸರ್ವ ಸಮಾಜದ ಜನರು ಯಾರೇ ಮೃತರಾದರೆ ಮೃತ ಶರೀರದ ದಹನ ಕ್ರಿಯೆಯನ್ನು ಮಾಡಲಾಗುತ್ತದೆ. ಈ ವಿಷಯ ಗ್ರಾಮದ ಎಲ್ಲ ಜನರಿಗೂ ಗೊತ್ತಿದ್ದರೂ ಸಹ ಇನ್ನುಳಿದ ಸಮಾಜಕ್ಕೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಮುಸ್ಲಿಂ ಸಮಾಜದವರು ಈ ಜಮೀನು ಸ್ಮಶಾನಕ್ಕೆ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಈ ಜಮೀನಿನ ಶೀಟ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಶೀಟ್ ಮಾಡಬಾರದೆಂದು ಎಲ್ಲ ಗ್ರಾಮಸ್ಥರ ತಕರಾರು ಇದೆ ಎಂದರು.
ಗ್ರಾಮದ ಸರ್ವೆ ನಂ.4 ರಲ್ಲಿ ವಿಶೇಷವಾಗಿ ಮುಸ್ಲಿಂ ಸಮಾಜ ಬಾಂಧವರಿಗೆ ಈಗಾಗಲೇ ಸ್ಮಶಾನ ಜಮೀನು ಇದೆ. ಮುಸ್ಲಿಂ ಸಮಾಜ ಬಾಂಧವರಿಗೆ ಸ್ಮಶಾನ ಜಮೀನು ಇದ್ದರೂ ಸರ್ವೆ ನಂ.65 ರಲ್ಲಿ ಮತ್ತೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಸರ್ವೆ ನಂ.65 ರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಸಮಸ್ತ ಗ್ರಾಮಸ್ಥರ ಅಭಿಪ್ರಾಯವಾಗಿದೆ ಎಂದರು.
ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ಎಸ್.ಎಚ್.ಅರಕೇರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಣಮಂತ ಮಾರ್ಸನಳ್ಳಿ, ಗುರಣ್ಣ ಜಮ್ಮಲದಿನ್ನಿ, ಬಸಪ್ಪ ಬ್ಯಾಳಿ, ಕಾಳಪ್ಪ ಮಾದರ, ಚಂದ್ರಶೇಖರ ಜಮ್ಮಲದಿನ್ನಿ, ಶಂಕ್ರೆಪ್ಪ ಹುಲಬೆಂಚಿ, ಪರಶುರಾಮ ಮಾದರ, ಬಸಪ್ಪ ಕಾಮನಕೇರಿ, ರಮೇಶ ಜಡದಾರಿ, ಸಿದ್ದು ತಳೇವಾಡ, ನಿಂಗಪ್ಪ ಜಮ್ಮಲದಿನ್ನಿ, ಗುರಪ್ಪ ಜಮ್ಮಲದಿನ್ನಿ, ಪಿ.ಎಸ್.ಹುಣಶ್ಯಾಳ, ದ್ಯಾಮಣ್ಣ ಜಮ್ಮಲದಿನ್ನಿ, ಬನ್ನೆಪ್ಪ ಹುಲಬೆಂಚಿ ಸೇರಿದಂತೆ ಇತರರು ಇದ್ದರು.

