ಕಾನ್ಪುರದಲ್ಲಿ ‘ಐ ಲವ್ ಮುಹಮ್ಮದ್’ ಬ್ಯಾನರ್ ಅಳವಡಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರ ವಿರುದ್ಧ ಎಫ್‌ಐಆರ್ ದಾಖಲೆಗೆ ಸಮುದಾಯದ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ “ಐ ಲವ್ ಮುಹಮ್ಮದ್” ಬ್ಯಾನರ್ ಅಳವಡಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರ ವಿರುದ್ಧ ದಾಖಲಾಗಿರುವ ಪೊಲೀಸ್ ಎಫ್‌ಐಆರ್ ಅನ್ನು ಖಂಡಿಸಿ, ವಿಜಯಪುರದ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿ (MMDC) ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಘಟನೆಯು ಅನ್ಯಾಯಪೂರ್ವಕ ಮತ್ತು ಖಂಡನೀಯವಾಗಿದ್ದು, ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ.
MMDC ತನ್ನ ಮನವಿ ಪತ್ರದಲ್ಲಿ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಭಾವನಾ ಸ್ವಾತಂತ್ರ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ ಎಂದು ತಿಳಿಸಿದೆ. “ಐ ಲವ್ ಮುಹಮ್ಮದ್” ಎಂಬ ಬ್ಯಾನರ್ ಧಾರ್ಮಿಕ ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಈ ಶಾಂತಿಯುತ ಸಂದೇಶವನ್ನು ಕ್ರಿಮಿನಲ್ ಕೃತ್ಯವೆಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಿರುವುದು ಭಾರತೀಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಈ ಘಟನೆಯು ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯ ಮತ್ತು ಅಸುರಕ್ಷತೆಯ ಭಾವನೆ ಮೂಡಿಸಿದ್ದು, ಸಮಾಜದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಭಂಗ ತರಬಹುದು ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ಎಂಎಂಡಿಸಿ ಮುಖಂಡರಾದ ಸೈಯದ್ ಜೈನುಲ್ ಅಬಿದಿನ್ ಹಾಶ್ಮಿ, ಡಿವಿಪಿ ಮುಖಂಡ ಶ್ರೀನಾಥ್ ಪೂಜಾರಿ, ಕೈಸರ ಇನಾಮದಾರ್, ಇರ್ಫಾನ್ ಶೇಖ, ರಫೀಕ್ ಸೌದಾರ್, ನ್ಯಾಯವಾದಿ ಮಹಮ್ಮದ್ ಪಟೇಲ್ ಬಗಲಿ, ನ್ಯಾಯವಾದಿ ಹಾಜಿ ಪಿಂಜಾರ್, ಸೈಯದ್ ಇಮ್ರಾನ್ ಜಹಾಗಿರದಾರ, ಮುಸ್ತಫಾ ಆಲಮೇಲ, ಜಿಯಾ ಪಠಾನ್, ಖಾಜಾ ನದಾಫ್, ಆಸಿಫ್ ಟಕ್ಕೆ, ಸೈಯದ್ ಗಡಗುಂಟಿ, ಆರ್.ಡಿ. ಶಿವನಗುತ್ತಿ, ನಿಜಾಮುದ್ದೀನ್ ಹಿರಿಯಾಳ, ಚಂದಹುಸೇನ ಮುಲ್ಲಾ, ತೌಸೀಫ್ ಇನಾಮ್ದಾರ್, ಕಾಸಿಂ ಪಟೇಲ್ ಬಿರಾದಾರ್, ಖಾಜಾ ಪಟೇಲ್ ಪಾಟೀಲ್, ದಾವಲ್ ಸಾಬ್ ಇಂಚಿಗೇರಿ, ಅಮೀನ್ ಪಟೇಲ್ ಬಿರಾದರ್, ಇಬ್ರಾಹಿಂ ಪಟೇಲ್ ಬಿರಾದರ್, ನಬಿ ರಸೂಲ್ ಬಿರಾದರ್, ಚಾಂದಸಾಬ ನದಾಪ್, ಲಾಡ್ಲೆಮಶಾಕ್ ಕಾತಮನಹಳ್ಳಿ, ಲಾಲ್ ಸಾಬ್ ಮುಲ್ಲಾ, ಬಂದಗಿ ಪಟೇಲ್ ಬಿರಾದರ್, ಬಂದೇನವಾಜ್ ಕಾತಮನಹಳ್ಳಿ, ರಾಜೇಬಾಕ್ಸಾರ್ ನದಾಫ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

