ಪದೋನ್ನತಿ ಹೊಂದಿದ ಬೋಧಕ ಸಿಬ್ಬಂದಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ಕೆಲಸವೆಂದರೆ ದೇವರ ಕೆಲಸವೆಂದು ನಂಬಿ ವಿದ್ಯಾರ್ಜನೆಗಾಗಿ ಬರುವ ಮಕ್ಕಳಲ್ಲಿ ಜ್ಞಾನಧಾರೆಯೆರೆಯುತ್ತಾ, ಅವರಲ್ಲಿ ಶಿಸ್ತು, ಸಂಯಮ, ನಡತೆ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ-ಮೌಲ್ಯಗಳಂತಹ ಒಳ್ಳೆಯ ಗುಣಗಳನ್ನು ಒಡಮೂಡಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೊರೆತ ಸರ್ಕಾರಿ ಸೇವೆ ಸಲ್ಲಿಸುವ ಭಾಗ್ಯವೆಂದು ಅರಿತು ಅತ್ಯಂತ ಪ್ರಾಮಾಣಿಕತೆ, ಸಮಯ ಪ್ರಜ್ಞೆ, ವೃತ್ತಿ ಗೌರವ-ಬದ್ಧತೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಕೆಲಸ ಮಾಡುವ ಸಂಸ್ಥೆಯ ಏಳ್ಗೆಗಾಗಿ ದುಡಿಯುವ ಮನೋಭಾವನ್ನು ನಾವೆಲ್ಲರೂ ಬೆಳೆಸಿಕೊಂಡಾಗ ಮಾತ್ರ ಸಲ್ಲಿಸಿದ ಸೇವೆ ಸಾರ್ಥಕ ಭಾವ ನಮ್ಮದಾಗುತ್ತದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ ಬೋಧಕ ಸಿಬ್ಬಂದಿಗಾಗಿ ಹಮ್ಮಿಕೊಂಡ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಮಾತನಾಡಿ, ನಾವು ಮಾಡುವ ಕೆಲಸದಲ್ಲಿಯೇ ಶ್ರದ್ಧೆ, ನಿಷ್ಠೆ, ನಿಸ್ವಾರ್ಥ ಸೇವೆ ಮತ್ತು ಕಾರ್ಯದಕ್ಷತೆಯಿಂದ ಸೇವೆ ಸಲ್ಲಿಸಬೇಕು. ವೃತ್ತಿ ಪದೋನ್ನತಿ ಹೊಂದಿದ ಎಲ್ಲ ಸಹ ಪ್ರಾಧ್ಯಾಪಕರ ಸೇವೆಯು ಇನ್ನಷ್ಟು ಹೆಚ್ಚಿನ ಹುದ್ದೆ ಅಲಂಕರಿಸುವಂತಾಗಲೆಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಚಂದ್ರಕಾಂತ.ಬಿ, ಪ್ರೊ. ಆರ್.ಎಸ್.ಕುರಿ, ಡಾ. ಎಸ್.ಕೆ.ಜಮಾದಾರ, ಪ್ರೊ. ಕೆ.ಎಂ.ಭಾವಿಕಟ್ಟಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸಂಗಮೇಶ ಗುರವ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ಚಿದಾನಂದ ಆನೂರ, ಡಾ. ರಾಜಶ್ರೀ ಮಾರನೂರ, ಡಾ. ಸಂತೋಷ ಕಬಾಡೆ, ಡಾ. ರೋಹಿಣಿ ಹಿರೇಶೆಟ್ಟಿ, ಡಾ. ಪ್ರಭುಲಿಂಗ ಪರುಗೊಂಡ, ಡಾ. ವಿಶಾಲಾಕ್ಷಿ ಹೊನ್ನಾಕಟ್ಟಿ, ಡಾ. ದೇವೆಂದ್ರಗೌಡ ಪಾಟೀಲ, ಡಾ. ಪ್ರಕಾಶ ಹಾವೇರಿಪೇಠ, ಪ್ರೊ. ಸಿದ್ರಾಮ ಯರನಾಳ, ಪ್ರೊ. ವಲ್ಲಭ ಕಬಾಡೆ, ಪ್ರೊ. ವಿನೋದ ಹುಲ್ಲೂರ, ಡಾ. ಶೀರಿನ್ ಸುಲ್ತಾನ ಇನಾಮದಾರ, ಡಾ. ಮಮತಾ ಬನ್ನೂರ, ಡಾ. ಕೇಶವಮೂರ್ತಿ, ಪ್ರೊ. ಎಂ.ಎಸ್.ನಾಯಕ, ಪ್ರೊ. ಆರ್.ಕೆ.ಜಾಲವಾದ, ಕಛೇರಿ ಅಧೀಕ್ಷಕಿ ಸರ್ವಶ್ರೀ ಚಟ್ಟೇರ, ಯು.ಬಿ.ಮುಜಾವರ, ಇನ್ನಿತರರು ಸಹ ಉಪಸ್ಥಿತರಿದ್ದರು.
ಪ್ರೊ. ಸಿದ್ರಾಮ ಯರನಾಳ ಕಾರ್ಯಕ್ರಮ ನಿರೂಪಿಸಿದರು. ಡಾ. ದೇವೇಂದ್ರಗೌಡ ಪಾಟೀಲ ವಂದಿಸಿದರು.

