ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನವರಾತ್ರಿ ಮಹೋತ್ಸವದ ಅಂಗವಾಗಿ ನಾಡದೇವಿಯನ್ನು ಶ್ರದ್ಧಾ ಭಕ್ತಿಯ ಮೂಲಕ ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಯಿತು.
ಪಟ್ಟಣದಲ್ಲಿ ಸೋಮವಾರ ಬೇವಿನಕಟ್ಟಿ ಗೌಡರ ಓಣಿಯ ನಾಡದೇವಿ ಉತ್ಸವ ಕಮೀಟಿಯಿಂದ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಮೂರ್ತಿಯನ್ನು ಹೊತ್ತು ಬೆಳಗ್ಗೆ ೧೧ ಗಂಟೆಗೆ ಪ್ರಾರಂಭವಾದ ಭವ್ಯ ಮೆರವಣಿಗೆ ಇಂಡಿ ರಸ್ತೆಯಿಂದ ಆರಂಭಗೊಂಡು ಪಂಚಾಚಾರ್ಯ ಕಲ್ಯಾಣಮಂಟಪ, ಅಂಬೇಡ್ಕರ ವೃತ್ತ, ರಾಷ್ಟೀಯ ಹೆದ್ದಾರಿ ೨೧೮ರ ಮೂಲಕ ಮೊಹರೆ ಹಣಮಂತ್ರಾಯ ವೃತ್ತ, ಮೇನ್ ಬಜಾರ ಮಾರ್ಗವಾಗಿ ಸಾಗುತ್ತಿರುವಂತೆ ಸಾಯಂಕಾಲ ೪ ಗಂಟೆಯ ಸಮಯಕ್ಕೆ ಮಳೆ ಆರಂಭಗೊಂಡಿತು. ನಂತರ ರಭಸವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಪ್ರತಿಷ್ಠಾಪನಾ ಸ್ಥಳಕ್ಕೆ ತಂದು ದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ಮೆರವಣಿಗೆಯಲ್ಲಿ ಕೇರಳದ ಚತುರ್ಮುಖ ತಂಡ, ತಮಿಳುನಾಡಿನ ವೀರಗಾಸೆ, ಸಾರವಾಡದ ಗೊಂಬೆಯಾಟ, ನಾಸೀಕದ ಡೋಲು, ಪುನಾದ ಜಂಗ್, ಜೋಗುತಿಯರ ತಂಡ, ಕೊಪ್ಪಳದ ವೇಷಗಾರರ ತಂಡ ಸಹಿತ ಹಲವಾರು ಗ್ರಾಮಗಳ ಹಲಗೆ, ಡೊಳ್ಳು ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಗಮನ ಸೆಳೆದರೆ, ಪಟ್ಟಣದ ಪೂರ್ಣ ಕುಂಭ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ದೇವಿಯ ಆರಾಧಾಕರು ದಿನದುದ್ದಕ್ಕೂ ಹನಿ ನೀರು ಕುಡಿಯದೆ ಉಪವಾಸ ಮಾಡಿದರೆ, ಕುಂಭ ಹೊತ್ತ ಮಹಿಳೆಯರು ಬರಿಗಾಲಲ್ಲೆ ಮೆರವಣಿಗೆಯಲ್ಲಿ ಸಾಗಿ ತಮ್ಮ ಭಕ್ತಿ ಭಾವ ಮೆರೆದರು.
ನಾಡದೇವಿ ಉತ್ಸವ ಕಮೀಟಿಯ ಅಧ್ಯಕ್ಷ ಸುರೇಶಗೌಡ ಪಾಟೀಲ(ಜಿಡ್ಡಿಮನಿ), ರವಿ ರಾಮಗೊಂಡ, ಕಲ್ಲನಗೌಡ ಪಾಟೀಲ(ಜಿಡ್ಡಿಮನಿ), ರಾಘು ಅವುಟಿ, ಬಸನಗೌಡ ಹತ್ತರಕಿಹಾಳ(ಪಾಟೀಲ), ಸಚೀನ ದೇವಣಗಾಂವ, ಬಾಬು ಹತ್ತರಕಿಹಾಳ, ರವಿ ಅವುಟಿ, ಮಹಾರುದ್ರ ಕಕ್ಕಳಮೇಲಿ ಸಹಿತ ಹಲವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

