ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಿಕ್ಕನಗುತ್ತಿ ಗ್ರಾಮದಲ್ಲಿ ರೂ.೨೪.೫೭ಕೋಟಿ ಅನುದಾನದಲ್ಲಿ ಶಾಲೆ ಮತ್ತು ವಸತಿ ನಿಲಯದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ರೂ.೧೬ಕೋಟಿ ಹಾಗೂ ವಸತಿ ನಿಲಯ (ಜಿ+೪)ಕ್ಕೆ ರೂ.೮ ಕೋಟಿ ೫೭ಲಕ್ಷ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಹಿಕ್ಕನಗುತ್ತಿ ಗ್ರಾಮ ವಿಶಾಲವಾದ ಭೂಪ್ರದೇಶದಲ್ಲಿ ಇಂತಹ ಭೂಮಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ. ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ ಕೀರ್ತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಶಿಕ್ಷಣಕ್ಕಾಗಿ ನಮ್ಮ ಕಾಂಗ್ರೆಸ್ ಸರಕಾರ ರೂ.೯ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದೆ. ಇವುಗಳ ಮಧ್ಯದಲ್ಲಿ ಕಾಂಗ್ರೆಸ್ ಸರಕಾರ ಸಿಂದಗಿ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ನೀಡುತ್ತಿದೆ. ೩೦ವರ್ಷಗಳ ಹಿಂದೆ ನಿರ್ಮಾಣವಾಗಿ ಶಿಥಿಲಾವಸ್ಥೆಯಲ್ಲಿರುವ ಎಸ್‌ಸಿ/ಎಸ್‌ಟಿ ವಸತಿ ನಿಲಯಗಳಿಗಾಗಿ ಜೀರ್ಣೋಧ್ಧಾರಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ.ಮಹದೇವಪ್ಪ ಅವರು ೧೪.೫೦ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಆಲಮೇಲ ಮತ್ತು ಸಿಂದಗಿ ತಾಲೂಕುಗಳಿಗೆ ವಿಶೇಷ ಅನುದಾನವನ್ನು ಕಾಂಗ್ರೆಸ್ ಸರಕಾರ ನೀಡುತ್ತಿದೆ. ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಮುಂಬರುವ ದಿನಮಾನಗಳಲ್ಲಿ ಗಣಿಹಾರ ಕ್ರಾಸ್‌ಯಿಂದ ಹಿಕ್ಕನಗುತ್ತಿ ಗ್ರಾಮದವರೆಗೆ ಡಾಂಬರೀಕರಣ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಗೊಸಯ್ಯ ಗಡ್ಡಯ್ಯ ಹಿರೇಮಠ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಮೇಶ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಗೃಹ ಮಂಡಳಿ ಅಧಿಕಾರಿ ಸಾದಿಕ್, ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ, ಹಿಕ್ಕನಗುತ್ತಿ ಸರಕಾರಿ ಶಾಲೆ ಮುಖ್ಯಗುರುಮಾತೆ ಸೈನಾಬಿ ಮಸಳಿ, ವಿ.ವಾಯ್.ಬಿರಾದಾರ, ನಿಂಗಣ್ಣ ಜೇರಟಗಿ, ಸಿದ್ದು ರಾಂಪುರ, ಎಚ್.ಎಂ.ಯಡಗಿ, ಸಿದ್ದು ಸಾತಲಗಾವ, ಕುಮಾರ ದೇಸಾಯಿ. ಕಾಂತನಗೌಡ ಪಾಟೀಲ, ವಿಠ್ಠಲ ಬಡಿಗೇರ, ಜೆಟ್ಟೆಪ್ಪ ಗೊಟಗುಣಕಿ, ನೂರಾಹ್ಮದ ಅತ್ತಾರ, ವಿಠ್ಠಲ ಕುಡಚಿ, ಧರ್ಮಣ್ಣ ಬಿರಾದಾರ, ಭೀಮಾಶಂಕರ ಹಗರಟಗಿ, ಸಿದ್ದಲಿಂಗ ಚೌಧರಿ, ಶರಣು ಹಡಪದ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ ಸ್ವಾಗತಿಸಿದರು. ಪ್ರಭು ಬಿರಾದಾರ ನಿರೂಪಿಸಿ ವಂದಿಸಿದರು.

