ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜಾಧ್ಯಕ್ಷ ಜಿ.ಹನುಮಂತಪ್ಪ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿದ್ದೇಶ್ವರ ಹೈಸ್ಕೂಲ್ ನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಜಿಲ್ಲಾ ಘಟಕ ರಚನೆ ಹಾಗೂ ಜಿಲ್ಲಾ ಸಭೆ ಕಾರ್ಯಕ್ರಮ ಜರುಗಿತು.
ಸಭೆಯನ್ನು ರಾಜಾಧ್ಯಕ್ಷ ಜಿ.ಹನುಮಂತಪ್ಪ ಉದ್ಘಾಟಿಸಿ ಮಾತನಾಡಿ, ಒಂದು ಸಂಘ ಬಲವರ್ಧನೆ ಆಗಬೇಕಾದರೆ ನೌಕರರ ಒಗ್ಗಟ್ಟು ಬಹಳ ಮುಖ್ಯ. ಹಾಗಾಗಿ ಸಂಘಟಿತರಾಗಿ ನಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದೆ. ಕಳೆದ ಹತ್ತಾರು ವರ್ಷಗಳಿಂದ ನಮ್ಮ ಬೇಡಿಕೆಗಳಿಗಾಗಿ ಎಲ್ಲಾ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಆದರೆ ವಿವಿಧ ಸಂಘಟನೆಗಳಲ್ಲಿ ಹರಿದು ಹಂಚಿ ಹೋಗಿರುವ ನಮ್ಮ ನೌಕರರನ್ನು ಒಟ್ಟುಗೂಡಿಸಿ ಅನುದಾನಿತ ಪ್ರಾಥಮಿಕದಿಂದ ಹಿಡಿದು ಪದವಿ ಕಾಲೇಜಿನವರೆಗೂ ಒಂದೇ ಸಂಘದ ಅಡಿ ತಂದು ಗಟ್ಟಿಯಾದ ಸಂಘಟನೆ ಮಾಡುವುದು ಅವಶ್ಯಕತೆ ಇದೆ. ಹಾಗಾಗಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕ್ರಿಯಾಶೀಲ ವಾಗಿ ರಚನೆ ಮಾಡಿದ್ದೇವೆ. ವಿಜಯಪುರ ಜಿಲ್ಲೆಯ ಅನುದಾನಿತ ಪ್ರಾಥಮಿಕ ಶಾಲೆಯಿಂದ ಪದವಿವರೆಗಿನ ನೌಕರರು ಸಂಘದ ಸದಸ್ಯತ್ವ ಪಡೆದು ಸಂಘ ಕರೆ ಕೊಟ್ಟಾಗ ಎಲ್ಲಾ ಹೋರಾಟಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಮ್ಮ ಅನುದಾನಿತ ನೌಕರರರಿಗೆ ಪಿಂಚಣಿ ಜಾರಿ ಮಾಡುವುದು, ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದು, ಪದವಿ ಕಾಲೇಜುಗಳ ನೌಕರರಿಗೆ ಕಾರ್ಯಭಾರ ಕಡಿಮೆ ಕಾರಣ ನೀಡಿ ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡುವುದನ್ನು ಕೈ ಬಿಡಬೇಕು. ಇಂತಹ ಹಲವಾರು ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯ ಮಾಡಲು ಸಂಘ ಬಲವರ್ಧನೆ ಮಾಡಿ ಹೋರಾಟಕ್ಕೆ ಅಣಿಯಾಗಬೇಕಾಗಿದೆ ಎಂದರು.
ಈ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಈಗಾಗಲೇ 2006 ನಂತರದ ಸೇವೆಗೆ ಸೇರಿದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿವೃತ್ತಿ ನಂತರದ ಬದುಕಿಗಾಗಿ ಪಿಂಚಣಿ ಕೊಡಬೇಕಾಗಿರುವುದು ಸರಕಾರದ ಕರ್ತವ್ಯ. ಸುಪ್ರೀಂಕೋರ್ಟ್ ಆದೇಶ ಮಾಡಿದರೂ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಪ್ರಸ್ತುತ ಸಿಧ್ದರಾಮಯ್ಯ ನವರ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ 6ನೇ ಗ್ಯಾರಂಟಿ ಆಗಿ ಓ.ಪಿ.ಎಸ್ ( ಹಳೆಯ ನಿಶ್ಚಿತ ಪಿಂಚಣಿ) ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿರುತ್ತಾರೆ. ಅದರಂತೆ ಸರಕಾರ ಅಧೀಕಾರಕ್ಕೆ ಬಂದು 3 ವರ್ಷ ಆದರೂ ಬೇಡಿಕೆ ಈಡೇರಿಸಿಲ್ಲ, ಹಾಗಾಗಿ ಬರುವ ನವೆಂಬರ್ ನಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಕರೆ ನೀಡುತ್ತಿದ್ದು, ಹೋರಾಟಕ್ಕೆ ತಾವೆಲ್ಲರೂ ಕೈ ಜೋಡಿಸಬೇಕು ಎಂದರು.
ರಾಮು ಗುಗವಾಡ ಮಾತನಾಡಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯಾಧ್ಯಕ್ಷ ರಾಮು ಗುಗವಾಡ, ಡಾ.ಮಲ್ಲಿಕಾರ್ಜುನ ಡೊಣ್ಣೂರ, ಮಲ್ಲನಗೌಡ ಹಡಲಗೇರಿ, ಆರ್.ಎಸ್.ತುಂಗಳ, ಬಿ.ಎಸ್.ಪಾಟೀಲ, ರಮೇಶ ಗಂಗನಳ್ಳಿ, ಶಿವಾನಂದ ಹಿರೇಕುರುಬರ, ಗಿರೀಶ್ ಬಿರಾದಾರ, ಅಶೋಕ ಕಟ್ಟಿ , ವಿಜಯಕುಮಾರ ವಪ್ಪಾರಿ, ರಂಜಿತ ಬಾಬರ, ಸೋಮನಾಥ ಗಣಿ, ಆನಂದ ಕುಲಕರ್ಣಿ , ಬುಳ್ಳಪ್ಪ ಡಿ.,ಶಿವಲಿಂಗ ಉಮ್ಮರಗಿ, ಮಹಾಂತೇಶ ಮೇರೆಖೋರ, ಚಂದ್ರಶೇಖರ ಲೋಣಿ, ಮಂಜುನಾಥ ನಾಯ್ಕೋಡಿ, ನೌಕರರು ಉಪಸ್ಥಿತರಿದ್ದರು

