ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಾ ಮಟ್ಟದ ಕ್ರೀಡಾಕೂಟವು ಕೇವಲ ಕ್ರೀಡೆಯ ಕಾರ್ಯಕ್ರಮವಲ್ಲ, ಅದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಯಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಅದಕ್ಕೆ ವಿಚಲಿತರಾಗದೇ ತಮ್ಮಲ್ಲಿರುವ ಪ್ರತಿಭೆ ಹೊರತಂದು ಸಾಧನೆಗೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣವರ ಹೇಳಿದರು.
ನಗರದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 2025-26ನೇ ಸಾಲಿನ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ 14 ವಯೋಮಿತಿ ಹಾಗೂ 17 ವಯೋಮಿತಿಯೊಳಗಿನ ಮಕ್ಕಳ ಗುಂಪು ಆಟಗಳ ತಾಲ್ಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರೀಡೆ ಮಾನವನ ಜೀವನದಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಕ್ರೀಡೆಗಳಿಂದ ದೈಹಿಕ, ಮಾನಸಿಕ ಗೃಂಥಿಗಳು ಬೆಳೆಯುತ್ತವೆ. ಶಿಸ್ತಿನ ಜೀವನಕ್ಕಾಗಿ ಕ್ರೀಡೆ ಪೂರಕವಾಗಿದೆ ಎಂದರು.
ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಬಾಗೆನ್ನವರ ಮಾತನಾಡಿ, ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವದರಿಂದ ನಾಯಕತ್ವದ ಗುಣಗಳು ಬೆಳೆಯುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದರು.
ನಗರದ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಕ್ರೀಡಾ ಧ್ವಜಾರೋಹಣ ನೇರವೆರಿಸಿದರು. ಇದೆ ಸಂದರ್ಭದಲ್ಲಿ ತಾಲೂಕಿನ ಐದು ಜನ ದೈಹಿಕ ಶಿಕ್ಷಕರಿಗೆ ಗೌರವಿಸಿದರು.
ವೇದಿಕೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ. ಎಸ್. ಕಲ್ಯಾಣಿ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕಿ ಪಂಚಾಕ್ಷರಿ ನಂದೇಶ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳಿ, ಇಸಿಒ ಸಂಗಮೇಶ ವಿಜಾಪೂರ, ಡಬ್ಲ್ಯೂ, ವಾಯ್. ಭಜಂತ್ರಿ, ವಿಜಯ ಹಲಗಿಮನಿ, ಚಂದ್ರು ಸಿದಗೊಂಡ, ಪಾಂಡು ಸಿಂಗರಡ್ಡಿ, ನಿರ್ಮಲಾ ಮಿರ್ಜಿ, ಸಮೀನಾ ಕೌಸರ, ಅಶೋಕ ಮಾಂಗ ಇತರರಿದ್ದರು.
ಮುಖ್ಯ ಶಿಕ್ಷಕ ಪಿ.ಎಸ್. ಕಟ್ಟಿಮನಿ, ಭಾರತಿ ಮದೀನವರ ಸಂಗಡಿಗರು ನಾಡಗೀತೆ ಹಾಡಿದರು, ಸುರೇಶ ಭೋಸ್ಲೆ ಸ್ವಾಗತಿಸಿದರು, ಬಾಹುಬಲಿ ಮುತ್ತೂರ ಪ್ರಜ್ಞಾವಿಧಿ ಭೋದಿಸಿದರು, ಅಪ್ಪು ಧರಿಗೌಡರ ನಿರೂಪಿಸಿದರು, ಬಾಹುಬಲಿ ನ್ಯಾಮಗೌಡ ವಂದಿಸಿದರು.

