ಚಡಚಣ ಎಸ್‌ಬಿಆಯ್ ಬ್ಯಾಂಕ್ ದರೋಡೆ ಪ್ರಕರಣ | ಗ್ರಾಹಕರಿಗೆ ಬ್ಯಾಂಕ್ ಅಧಿಕಾರಿಗಳ ಅಭಯ
*ಉದಯರಶ್ಮಿ ದಿನಪತ್ರಿಕೆ*
ಚಡಚಣ: ಇತ್ತೀಚೆಗೆ ನಡೆದ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆಯಾದ ಹಿನ್ನಲೆಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಹಾಗೂ ಚಿನ್ನ ಅಡವಿಟ್ಟ ಗ್ರಾಹಕರು ಆಘಾತಕ್ಕೋಳಗಾಗಿದ್ದು, ಗ್ರಾಹಕರಲ್ಲಿ ಮೂಡಿದ ಆತಂಕವನ್ನು ದೂರ ಮಾಡಲು ಗ್ರಾಹಕರಿಗೆ ಎಸ್.ಬಿ.ಐ. ಬ್ಯಾಂಕ್ ವತಿಯಿಂದ ಸ್ಥಳೀಯ ಖಾಸಗಿ ಹೊಟೆಲ್‌ನಲ್ಲಿ ಶುಕ್ರವಾರ ಸಭೆಯನ್ನು ನಡೆಸಿ ಗ್ರಾಹಕರಿಗೆ ಧೈರ್ಯವನ್ನು ತುಂಬಲಾಯಿತು.
ಸಭೆಯಲ್ಲಿ ಎಸ್‌ಬಿಐ ಬ್ಯಾಂಕಿನ ಡಿಜಿಎಂ, ಆರ್.ಎಂ. ಎಜಿಎಂ ಮಟ್ಟದ ಅಧಿಕಾರಿಗಳು ಭಾಗವಹಿಸಿ ಬ್ಯಾಂಕ್ ದರೋಡೆಯಲ್ಲಿ ಹಣ ಕಳೆದುಕೊಂಡ ಗ್ರಾಹಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಗ್ರಾಹಕರು ಯಾವುದೆ ಸಂದರ್ಭದಲ್ಲೂ ಭಯಪಡುವ ಅವಶ್ಯಕತೆ ಇಲ್ಲ, ಗ್ರಾಹಕರ ಎಲ್ಲ ಬಂಗಾರ ಮತ್ತು ಹಣದ ಜವಾಬ್ದಾರಿಯನ್ನು ಬ್ಯಾಂಕ್ ಹೊರಲಿದೆ. ಎಲ್ಲ ಸಂದರ್ಭಗಳಲ್ಲಿ ಬ್ಯಾಂಕ ಗ್ರಾಹಕರೊಂದಿಗೆ ಇರಲಿದೆ. ಗ್ರಾಹಕರು ದಯವಿಟ್ಟು ಬ್ಯಾಂಕಿನೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ವಿನಂತಿಸಿದರು.
ಈ ಸಂಧರ್ಭದಲ್ಲಿ ಗ್ರಾಹಕರು ಅನೇಕ ಪ್ರಶ್ನೆಗಳನ್ನು ಕೇಳಿದರು. ಬಂಗಾರ ಅಡವಿಟ್ಟು ಸಾಲ ಪಡೆದವರು ಸಾಲಕ್ಕೆ ಸಧ್ಯ ಬಡ್ಡಿಯನ್ನು ಕಟ್ಟಬೇಕಾಗಿದೆ ಅದನ್ನು ಮನ್ನಾ ಮಾಡಬೇಕು, ಒಂದು ವೇಳೆ ಕದ್ದೋಯ್ದ ಬಂಗಾರದ ಆಭರಣಗಳು ಸಿಗದಿದ್ದರೆ ತಮ್ಮ ಚಿನ್ನಕ್ಕೆ ದರೋಡೆಯ ದಿನದಂದು ಇದ್ದ ಬೆಲೆಯನ್ನು ನೀಡಬೇಕು, ನಾವುಗಳು ಸೇಫ್ ಲಾಕ್‌ರಗಳಲ್ಲಿ ಒಡವೆಗಳನ್ನು ಮತ್ತು ಕಾಗದ ಪತ್ರಗಳನ್ನು ಇಟ್ಟಿದ್ದು ಅದರ ಪರಸ್ಥಿತಿ ಏನು ಎಂಬ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಗ್ರಾಹಕರು ಪಟ್ಟಣದ ಎಸ್.ಬಿ.ಐ. ಬ್ರ್ಯಾಂಚ್‌ನಲ್ಲಿ ಸುಸಜ್ಜಿತ ಆಯುಧಉಳ್ಳ ಸೆಕ್ಯೂರಿಟಿ ಗಾರ್ಡ ಇಲ್ಲದಿರುವದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಗ್ರಾಹಕರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು ಗ್ರಾಹಕರಿಗೆ ಯಾವುದೆ ತೊಂದರೆ ಆಗದಂತೆ ಮತ್ತು ಅವರಿಗೆ ಹಾನಿಯಾಗದಂತೆ ಕ್ರಮ ಕೈಕೊಳ್ಳುವದಾಗಿ ಹೇಳಿದರು. ಆದರೆ ಎಲ್ಲ ವ್ಯವಸ್ಥೆ ಸರಿದಾರಿಗೆ ಬರಬೇಕಾದರೆ ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಆದ್ದರಿಂದ ಗ್ರಾಹಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಸಭೆಯಲ್ಲಿ ಎಡಿಶನಲ್ ಎಸ್.ಪಿ. ರಾಮನಗೌಡ ಹಟ್ಟಿ ಮಾತನಾಡಿ, ಪೊಲೀಸ್ ಇಲಾಖೆ ದರೋಡೆಕೋರರ ಬೆನ್ನು ಬಿದ್ದಿದೆ. ಶೀಘ್ರದಲ್ಲಿಯೆ ನಮ್ಮ ತಂಡ ಕಳ್ಳರನ್ನು ಬಂಧಿಸುವದಾಗಿ ಹೇಳಿದರು. ಈಗಾಗಲೆ ದರೋಡೆ ಮಾಡಿದ ೭.೫ ಕೆ.ಜಿ ಬಂಗಾರ ಮತ್ತು ೪೨ ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಿರುವದಾಗಿ ಹೇಳಿದ ಅವರು, ಬ್ಯಾಂಕಿನ ಸುರಕ್ಷತೆ(ಸೇಫ್ಟೀ) ಕುರಿತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ದಯವಿಟ್ಟು ಯಾರೂ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು. ತಕ್ಷಣವೆ ಸುಸಜ್ಜಿತ ಆಯುಧಉಳ್ಳ ಸೆಕ್ಯೂರಿಟಿ ಗಾರ್ಡಗಳನ್ನು ನೇಮಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಅವರು ಹೇಳಿದರು.
ಚಿನ್ನ ಕಳೆದುಕೊಂಡ ಅನೇಕ ಗ್ರಾಹಕರು ಅಧಿಕಾರಿಗಳ ಮೇಲೆ ತಮ್ಮ ಸಿಟ್ಟನ್ನು ತೋಡಿಕೊಂಡರು.
ಸಭೆಯಲ್ಲಿ ಡಿಜಿಎಂ ಜ್ಯೋತಿ ಮೋಹಾಂತಿ, ಆರ್‌ಎಂ ವಿಕಾಸ ಭಾಗೋತ್ರಾ, ಎಜಿಎಂ ರಾಜೀವ ಮಿತ್ತಲ, ಸಿ.ಎಂ.ಓ. ಪ್ರಲ್ಹಾದ ದೇಸಾಯಿ, ಬ್ರ್ಯಾಂಚ ಮ್ಯಾನೇಜರ ತಾರಕೇಶ್ವರ ಸೇರಿದಂತೆ ಎಸ್‌ಬಿಐ ಬ್ಯಾಂಕಿನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

