ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಸಂಸದ ಜಿಗಜಿಣಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ವಿವಿಧ ರೀತಿಯ ಸೇವೆಯ ರೂಪದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಿಜೆಪಿ ನಗರ ಮಂಡಳ ವತಿಯಿಂದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹಲವಾರು ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಷಯ ಕೋರಿದರು. ೭೬ ಜನ ಕಾರ್ಯಕರ್ತರು ರಕ್ತದಾನ ಮಾಡಿದರು.
ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ, ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ ಹಾಗೂ ದಿವ್ಯ ದೇಶಭಕ್ತಿಯ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿರುವ ಈ ಅವಧಿಯಲ್ಲಿ ಭಾರತ ಅಭಿವೃದ್ಧಿಯಲ್ಲಿ ನಾಗಾಲೋಟ ಬೀರುತ್ತಿದೆ, ಮೊನ್ನೆಯಷ್ಟೇ ಜೀವನಾವಶಕ್ಯ ವಸ್ತುಗಳನ್ನು ಜಿಎಸ್‌ಟಿಯ ಪರಿಧಿಯಲ್ಲಿ ಹೊರಗಿಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ, ಕಪ್ಪುಹಣದ ಸಮರ ಸೇರಿದಂತೆ ಅನೇಕ ದಿಟ್ಟ ಹೆಜ್ಜೆಗಳನ್ನು ಇರಿಸಿದ ಮೋದಿ ನಮ್ಮ ಹೆಮ್ಮೆಯ ನಾಯಕ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಷ್ಟೋ ವರುಷಗಳ ಕನಸಾಗಿದ್ದ ರಾಮ ಮಂದಿರ ನಿರ್ಮಾಣ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ, ನೋಟು ರದ್ಧತಿ ಮೂಲಕ ಕಪ್ಪು ಹಣದ ವಿರುದ್ಧ ಪ್ರಹಾರ, ಜನಸಾಮಾನ್ಯರಿಗೆ ತೆರಿಗೆ ಹೊರೆಯಿಂದ ಕಾಪಾಡಿದ್ದು ಮೋದಿ ಅವರ ಸಾಧನೆಗಳಲ್ಲಿ ಒಂದು, ಪದೇ ಪದೇ ಮಾನವೀಯತೆ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಉಗ್ರವಾದಿಗಳಿಗೆ ತಕ್ಕ ಪಾಠ ಕಲಿಸಿದ್ದು ಮೋದಿಜಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಭಾರತವನ್ನು ವಿಶ್ವಗುರುವಾಗಿಸುವ ಏಕೈಕ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿಶ್ವವೇ ಮೆಚ್ಚಿದೆ, ನಮಗೂ ಮೋದಿ ಅವರಂತಹ ಪ್ರಧಾನಿ ಬೇಕು ಎಂದು ಅನೇಕ ರಾಷ್ಟçಗಳ ಜನತೆ ಬಯಸುತ್ತಿರುವುದಕ್ಕೆ ಅವರ ಕಾರ್ಯದಕ್ಷತೆಯೇ ಸಾಕ್ಷಿ ಎಂದರು.
ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಅವರು ಒಬ್ಬ ವ್ಯಕ್ತಿಯಲ್ಲ ಅವರು ಒಬ್ಬ ಶಕ್ತಿ, ದೇಶಭಕ್ತಿ, ನಿಸ್ವಾರ್ಥ ಸೇವೆ, ಬಡವರ ಕಾಳಜಿ ಹೀಗೆ ಈ ಎಲ್ಲ ಶಬ್ದಗಳಿಗೂ ಇನ್ನೊಂದು ಹೆಸರೇ ಮೋದಿಜಿ ಎಂದರು.
ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ, ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ್ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ್, ಪ್ರಕಾಶ ಅಕ್ಕಲಕೋಟ, ಡಾ.ಸುರೇಶ್ ಬಿರಾದಾರ್, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ್, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗುರ, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಣಿ ಸದಸ್ಯೆ ಮಲ್ಲಮ್ಮ ಜೋಗೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪಾಪೂಸಿಂಗ ರಜಪೂತ, ಚಿನ್ನು ಚಿನಗುಂಡಿ, ವಿಜಯ ಜೋಶಿ ಉಪಸ್ಥಿತರಿದ್ದರು.

