ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ ೨೦೦ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತೋತ್ಸವದಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತವು ಹಮ್ಮಿಕೊಂಡಿರುವ ರಥಯಾತ್ರೆ ಸೆ.21ರಂದು ಸಂಜೆ 6 ಗಂಟೆಗೆ ತಾಳಿಕೋಟೆಯಿಂದ ಬಸವನಬಾಗೇವಾಡಿಗೆ ಬರಲಿದೆ ಎಂದು ಎಬಿವ್ಹಿಪಿ ಹಿರಿಯ ಕಾರ್ಯಕರ್ತರಾದ ಅಶೋಕ ಕಲ್ಲೂರ ದೇಸಾಯಿ, ಮಲ್ಲಿಕಾರ್ಜುನ ದೇವರಮನಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥಯಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ೨೦೦ ವರ್ಷಗಳ ಹಿಂದೆ ಮಹಿಳೆಯೋರ್ವಳು ದಕ್ಷ ಆಡಳಿತ ನಡೆಸಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕತ್ತಿ ಹಿಡಿದು ಧೈರ್ಯದಿಂದ ಯುದ್ಧ ಮಾಡಿ ಮೊದಲ ಯುದ್ಧದಲ್ಲಿ ಅವರನ್ನು ಸೋಲಿಸಿ, ಕಿತ್ತೂರಿನ ಸ್ವಾತಂತ್ರವನ್ನು ರಕ್ಷಿಸಲು ಯತ್ನಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ. ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಡಿದ ಮೊದಲ ಮಹಿಳಾ ಆಡಳಿತಗಾರ್ತಿಯಾಗಿ ಭಾರತೀಯ ಸ್ವಾತಂತ್ರ ಚಳುವಳಿಯ ಪ್ರಮುಖ ಸಂಕೇತವಾಗಿ ಅವರಿಂದು ಸ್ಮರಿಸಲ್ಪಡುತ್ತಾರೆ ಎಂದು ಹೇಳಿದರು.
16ನೇ ಶತಮಾನದಲ್ಲಿ ಕರಾವಳಿ ಕರ್ನಾಟಕದ ಉಲ್ಲಾಳವನ್ನು ಆಳಿದ ಚೌಟ ರಾಜವಂಶದ ಪ್ರಥಮ ತೌಲವ ರಾಣಿಯಾಗಿದ್ದ ರಾಣಿ ಅಬ್ಬಕ್ಕ ತನ್ನ ಹೋರಾಟದ ಮೂಲಕ ಪೋರ್ಚುಗೀಸರ ಪಾಲಿಗೆ ಸಿಂಹ ಸ್ವಪ್ನವಾಗಿದ್ದಳು. ಈ ಇಬ್ಬರು ಕನ್ನಡ ನಾಡಿನ ಹೋರಾಟಗಾರರ ಕುರಿತು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸುವ ದೃಷ್ಟಿಯಿಂದ ಈ ರಥಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯಾದ್ಯಂತ ಎರಡು ರಥಯಾತ್ರೆಗಳಿಂದ ಸುಮಾರು 50ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ರಥಯಾತ್ರೆಯು ಸಪ್ಟೆಂಬರ್ 21ರಂದು ಸಂಜೆ 6 ಗಂಟೆಗೆ ತಾಳಿಕೋಟೆ ರಸ್ತೆಯ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಸ್ವಾಗತಿಸಿ ಜಾನಪದ ಕಲಾ ಮೇಳ ಹಾಗೂ ಪಂಜಿನ ಮೆರವಣಿಗೆದೊಂದಿಗೆ ಬಸ್ ನಿಲ್ದಾಣ, ತೆಲಗಿ ರಸ್ತೆ, ವಿದ್ಯಾರಣ್ಯ ಗ್ರಂಥಾಲಯ, ಗಣಪತಿ ವೃತ್ತ, ಬಸವೇಶ್ವರ ವೃತ್ತ, ನಿಯೋಜಿತ ರಾಣಿ ಚನ್ನಮ್ಮಳ ವೃತ್ತ, ಬಸವೇಶ್ವರ ದೇವಾಲಯದ ಹೊರ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಹೇಳಿದರು.
ಎಬಿವ್ಹಿಪಿ ಹಿರಿಯ ಕಾರ್ಯಕರ್ತರಾದ ಬಬಲು ಅಗರವಾಲ, ನಾಗೇಶ ನಾಗೂರ, ಶಿವಾನಂದ ನಾಗರಾಳ, ಅಯ್ಯಪ್ಪ ಕಡ್ಲಿಮಟ್ಟಿ, ವಿ.ಸಂ.ಕಾರ್ಯದರ್ಶಿ ಹರ್ಷ ನಾಯಕ, ರಾಜ್ಯ ಕಾನೂನು ವಿದ್ಯಾರ್ಥಿ ಪ್ರಮುಖ ಮಂಜುನಾಥ ಹಳ್ಳಿ, ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ, ನಗರ ಕಾರ್ಯದರ್ಶಿ ಆದರ್ಶ ನಾಯಕ ಇದ್ದರು.

