ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸೋಂಪುರ ರಸ್ತೆ, ಹಳೆಯ ಚಾಂದಕವಟೆ ರಸ್ತೆ, ಓಂ ನಗರ, ಬಂದಾಳ ರಸ್ತೆ, ಕಲ್ಯಾಣ ನಗರ ಮತ್ತು ಜ್ಯೋತಿ ನಗರ ಸೇರಿದಂತೆ ವಿವಿದೆಡೆ ಸೆ.೧೮ರ ರಾತ್ರಿ ಭೂಕಂಪನ ಸಂಭವಿಸಿದ ಕಾರಣ ಸ್ಥಳೀಯ ಸಾರ್ವನಿಕರಲ್ಲಿ ಭಯದ ವಾತಾವರಣ ಮನೆಮಾಡಿದೆ. ಇದರ ಕುರಿತಾಗಿ ಜಿಲ್ಲೆಯ ತಂಡವನ್ನು ಕರೆಯಿಸಿ ಪರಿಶೀಲನೆ ಮಾಡಲಾಗಿದೆ. ಅವರು ಪ್ರಾಥಮಿಕ ವರದಿಯನ್ನು ನೀಡಿರುತ್ತಾರೆ. ಭೂಕಂಪನದ ಅನುಭವವಾದ ಸಿಂದಗಿಯ ಸುತ್ತಮುತ್ತಲಿನ ಭಾಗದಲ್ಲಿ ಭೂಮಿಯ ಆಳದಲ್ಲಿ ಸುಣ್ಣದ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಅತಿಯಾದ ಮಳೆಯಾದ ಕಾರಣ ನೀರು ಸುಣ್ಣದ ಜೊತೆ ಬೆರೆತು ರಾಸಾಯನಿಕ ಪ್ರಕ್ರಿಯೆ ಜರುಗುವುದರಿಂದ ಈ ರಸಾಯನವು ಭೂಮಿಯಲ್ಲಿ ಅತ್ತಿಂದಿತ್ತ ಹೊಯ್ದಾಡುವುದರಿಂದ ಭೂಮಿಯಲ್ಲಿ ಕಂಪನ ಉಂಟಾಗುತ್ತದೆ. ಈ ಕಂಪನವೇ ನಮಗೆ ಭೂಕಂಪನ ಎಂಬಂತೆ ಭಾಸವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಸಾರ್ವಜನಿಕರು ಪ್ರಕೃತಿಯ ಈ ವಿಸ್ಮಯದಿಂದ ಯಾವುದೇ ರೀತಿ ಘಾಭರಿಗೆ ಒಳಗಾಗಬಾರದು ಎಂದು ಸಲಹೆ ನೀಡಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ವಿಸೃತವಾಗಿ ಚರ್ಚೆ ಮಾಡಲಾಗಿ ಬರುವ ಸೆ.೨೨ ಮತ್ತ ೨೩ರಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ತಂಡವೊಂದು ಭೇಟಿ ನೀಡಲಿದ್ದು, ಹೆಚ್ಚಿನ ಮಾಹಿತಿ ಅವರ ವರದಿಯ ನಂತರ ಸಿಗಲಿದೆ ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾಹಿತಿ ನೀಡಿದರು.
ಭೂಮಿಯಲ್ಲಿ ಕಂಪನ ಉಂಟಾಗಿ ಇದರಿಂದ ಮನೆಯಲ್ಲಿರುವ ಪಾತ್ರೆ-ಪಗಡೆಗಳು ಅಲುಗಾಡಿದ್ದಲ್ಲೆ ಕೆಲವೊಂದು ಮನೆಗಳಲ್ಲಿ ಕೆಳಗೆ ಬಿದ್ದವು. ಕೆಲವೊಂದೆಡೆ ವಿಚಿತ್ರ ಶಬ್ದವಾದ ಅನುಭವವನ್ನು ತಾವು ಅನುಭವಿಸಿದ್ದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಪ್ರಕ್ರಿಯೆಯ ನಂತರ ನಗರದ ಜನತೆಯಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಕೆಲವೊಬ್ಬರಲ್ಲಿ ಈ ಭೂಕಂಪ ಇನ್ನು ಇರಲಿದೆ. ಭೂಮಿ ಮತ್ತೇ ಯಾವಾಗ ಕಂಪಿಸುತ್ತದೆಯೋ ತಿಳಿದಿಲ್ಲ ಎನ್ನುವ ತುಮುಲ ಮನೆಮಾಡಿತ್ತು.

