ಉದಯರಶ್ಮಿ ದಿನಪತ್ರಿಕೆ
ಇಂಡಿ: ಯಲ್ಲಾಲಿಂಗ ಎಂಬ ಶ್ರೇಷ್ಠ ರತ್ನವನ್ನು ನೀಡಿದ ಸ್ಥಳ ಮಿರಗಿ ಗ್ರಾಮ. ಈ ಸಂತ ಏಳು ಕೋಟಿ ಜಪ-ತಪ ಮಾಡಿ ಸಮಾಜಕ್ಕೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು,
ಲಚ್ಯಾಣದ ಸಿದ್ಧಲಿಂಗ ಪ್ರಭುವಿನ ಶಿಷ್ಯನಾಗಿ ಸಮಾಜದ ಪರಿವರ್ತನೆ ಕೆಲಸ ಮಾಡಿದ ಮಹಾತ್ಮ ಎಂದು ಶಿಕ್ಷಕ ವೈ ಜಿ ಬಿರಾದಾರ ಹೇಳಿದರು.
ಅವರು ಶನಿವಾರದಂದು ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ‘ಶ್ರೀ ಯಲ್ಲಾಲಿಂಗ ಮಹಾರಾಜರ ಜೀವನ ಚರಿತ್ರೆ’ ಕುರಿತ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಶಿವಪ್ಪ, ಕಾಶಿಬಾಯಿ ಪುಣ್ಯ ದಂಪತಿಗಳ ಮಗನಾಗಿ ಜನಿಸಿದ ಯಲ್ಲಪ್ಪ ಎಂಟು ವರ್ಷ ಪ್ರಾಯದಲ್ಲೇ ಶಿವಧ್ಯಾನ ನಿರತನಾಗಿ ಕುರಿ ಕಾಯುವ ಕಾಯಕ ಮಾಡುತ್ತ, ಮುಂದೆ ಹಲವು ಕಷ್ಟಗಳ ಮಧ್ಯೆ ಯಲ್ಲಾಲಿಂಗರು ಸ್ಮಶಾನ ಭೂಮಿ
ಯನ್ನೇ ಮುಕ್ತಿ ಮಂದಿರವನ್ನಾಗಿಸಿ ಭವ್ಯ ಮಠ ಕಟ್ಟಿದ ಮಹಾನ್ ಸಂತರಿವರು ಎಂದು ಹೇಳಿದರು.
ಲಚ್ಯಾಣ ಸಿದ್ದಲಿಂಗರಿಂದ ದೀಕ್ಷೆ ಪಡೆದು ಬೆತ್ತ ಜೋಳಿಗೆ ಹಿಡಿದು ಯಲ್ಲಾಲಿಂಗ ಮಹಾರಾಜನಾಗಿ ದೇಶದಲ್ಲಿ ಮೆರೆದ ಅವರ ಲೋಕ ಕಲ್ಯಾಣ ಕಾರ್ಯ ಅನುಪಮವಾದುದು.
ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಯಲ್ಲಾಲಿಂಗರಕೀರ್ತಿ ಹರಡಿತ್ತು. ಜನರ ಆಡುನುಡಿಗಳಲ್ಲಿ ಸರಳವಾಗಿ ಜೀವನ ಸಂದೇಶ ನೀಡುತ್ತಾ, ಜನಸೇವೆಯೇ ಜನಾರ್ಧನ ಸೇವೆ ಎಂದರಿತ ಯಲ್ಲಾಲಿಂಗರ ಬದುಕೇ ಅದ್ಭುತವಾದುದು
ಎಂದು ಹೇಳಿದರು.
ಸಾಹಿತಿ ಸಿ ಎಂ ಬಂಡಗರ ಮಾತನಾಡಿ, ಯಲ್ಲಾಲಿಂಗರ ಜೀವನವೇ ಒಂದು ಪವಾಡ. ಕುಸ್ತಿ ಪೈಲ್ವಾನ ನಾಗಿದ್ದ ಯಲ್ಲಪ್ಪ ಹಾಲುಮತದ ಮಹಾತ್ಮನಾಗಿದ್ದು ನಿಜಕ್ಕೂ ಒಂದು ಪವಾಡವೇ ಸರಿ. ಒಬ್ಬ ವ್ಯಕ್ತಿಯ ಜೀವನದಲ್ಲಿ ಸಾವಿನ ಘಟನೆಗಳು ಹೊಸ ತಿರುವಿಗೆ ಕಾರಣ ಎಂಬುದಕ್ಕೆ ಯಲ್ಲಾಲಿಂಗರ ಜೀವನವೇ ನಿದರ್ಶನ ಎಂದು ಹೇಳಿದರು.
ಡಾ ಚನ್ನಪ್ಪ ಕಟ್ಟಿ, ಡಾ ಎಂ ಎಂ ಪಡಶೆಟ್ಟಿ, ಡಾ ಡಿ ಎನ್ ಅಕ್ಕಿ, ರತ್ನಾಕರ ಪಾಟೀಲ, ಗೀತಯೋಗಿ, ರಾಘವೇಂದ್ರ ಕುಲಕರ್ಣಿ, ಶ್ರೀಧರ ಹಿಪ್ಪರಗಿ, ರಾಚು ಕೊಪ್ಪ, ವಿದ್ಯಾ ಕಲ್ಯಾಣಶೆಟ್ಟಿ, ಎಸ್ ವ್ಹಿ ಹರಳಯ್ಯ, ನಿಂಗಣ್ಣ ಬಿರಾದಾರ, ಡಾ ರಾಜಶ್ರೀ ಮಾರನೂರ, ರವಿ ಅರಳಿ, ಆರ್ ವ್ಹಿ ಪಾಟೀಲ, ಸಂಗನಗೌಡ ಹಚ್ಚಡದ, ಶಿವಲಿಂಗ ಕಲಬುರ್ಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕ ಸಂತೋಷ ಬಂಡೆ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಸರೋಜಿನಿ ಮಾವಿನಮರ ನಿರೂಪಿಸಿದರು.
