ಕರಜಗಿ ಕಾನೂನು ವಿದ್ಯಾರ್ಥಿಗಳಿಂದ ಲೋಕ್‌ಅದಾಲತ್ ವೀಕ್ಷಣೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಲೋಕ್ ಅದಾಲತ್ ಎಂದರೆ ಜನಸಾಮಾನ್ಯರಿಗೆ ವೇಗವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವ ವ್ಯವಸ್ಥೆಯಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಹೇಳಿದರು.
ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕ್ ಅದಾಲತ್‌ನ್ನು ವೀಕ್ಷಣೆ ಮಾಡಲು ಬಂದಿದ್ದ ತಾಳಿಕೋಟೆಯ ಮಾತೋಶ್ರಿ ಕಮಲಾಬಾಯಿ ಸಿದ್ದಪ್ಪ ಕರಜಗಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಲೋಕ್‌ಅದಾಲತ್ ನಲ್ಲಿ ಪ್ರಕರಣಗಳನ್ನು ಪರಸ್ಪರ ಸಮಾಧಾನದ ಮೂಲಕ ಬಗೆಹರಿಸಲಾಗುತ್ತದೆ. ಇಲ್ಲಿ ಎರಡೂ ಪಕ್ಷಗಳು ಗೆದ್ದಂತಾಗುವ ಜೊತೆಗೆ ಸಂಬAಧಗಳು ದೂರಾಗುವದಿಲ್ಲ. ಹಾಗಾಗಿ ದೇಶದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಲೋಕ್ ಅದಾಲತ್ ಪ್ರಾರಂಭಿಸಲಾಗಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ನ್ಯಾಯಾಲಯದ ಕಾರ್ಯವಿಧಾನ, ಪ್ರಕರಣಗಳ ವಿಚಾರಣೆ ಹಾಗೂ ನ್ಯಾಯಾಧೀಶರ ಕರ್ತವ್ಯಗಳ ಕುರಿತು ತಿಳಿದುಕೊಂಡರು. ನ್ಯಾಯಾಧೀಶರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ, ಕಾನೂನು ವೃತ್ತಿಯ ಮಹತ್ವ ಮತ್ತು ಸಮಾಜದಲ್ಲಿ ನ್ಯಾಯಾಂಗದ ಪಾತ್ರದ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ನ್ಯಾಯಾಂಗ ವ್ಯವಸ್ಥೆಯ ಪ್ರಾಯೋಗಿಕ ಅರಿವು ಪಡೆಯಲು ಸಹಾಯಕವಾಯಿತು ಎಂದು ಕಾಲೇಜಿನ ಉಪನ್ಯಾಸಕಿ, ವಕೀಲೆ ಶೋಭಾ ಕಾಶಿನಕುಂಟಿ ತಿಳಿಸಿದರು. ವಿದ್ಯಾರ್ಥಿಗಳು ಕೂಡ ನ್ಯಾಯಾಲಯದ ಕಾರ್ಯವಿಧಾನವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆತಿದ್ದು ಸಂತಸ ತಂದಿದೆ ಎಂದರು.
ಈ ವೇಳೆ ಅಪರ ಸರ್ಕಾರಿ ವಕೀಲರಾದ ಎಚ್.ಎಲ್.ಸರೂರ, ನ್ಯಾಯವಾದಿಗಳಾದ ಎಂ.ಎಚ್.ಕ್ವಾರಿ, ಚೇತನ ಶಿವಶಿಂಪಿ, ರವಿ ನಾಲತವಾಡ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಇದ್ದರು.

