ವಿಜಯಪುರದ ಶಿವಾಲಯ ದೇವಸ್ಥಾನದಲ್ಲಿ ಜರುಗಿದ “ಬುತ್ತಿ ಜಾತ್ರೆ” ಉದ್ಘಾಟಿಸಿದ ಶಿರಹಟ್ಟಿಯ ಫಕೀರ ಸಿದ್ದರಾಮ ಶಿವಯೋಗಿಗಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸವು ಒಂದು ವಿಶಿಷ್ಟವಾದ ಆಚರಣೆಯಾಗಿದೆ. ಈ ಮಾಸದಲ್ಲಿ ನಾವು ಪ್ರತಿದಿನವು ಶಿವ ಧ್ಯಾನ, ತಪಸ್ಸು, ಪ್ರಾರ್ಥನೆ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮಿಕತೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವರನ್ನು ಭಕ್ತಿ-ಭಾವದಿಂದ ಪೂಜಿಸಿದರೆ ನಮ್ಮೆಲ್ಲ ಸಂಕಷ್ಟಗಳು ದೂರಾಗಲಿವೆ. ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಮತ್ತು ಸಾರ್ಥಕ ಬದುಕಿನ ಸತ್ಯವನ್ನು ಅರಿಯಲು ಮತ್ತು ಮನದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ಶ್ರಾವಣ ಮಾಸವು ಪ್ರಯೋಜನಕಾರಿ ಎಂದು ಭಾವೈಕ್ಯತೆಯ ಮಠವೆಂದೇ ಹೆಸರುವಾಸಿಯಾದ ಶಿರಹಟ್ಟಿಯ ಫಕೀರ ಸಿದ್ದರಾಮ ಶಿವಯೋಗಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಅವರು ನಗರದ ನವರಸಪುರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಮಂಗಲ ಪ್ರಯುಕ್ತ ಆ.೨೧ ರಂದು ಜರುಗಿದ “ಬುತ್ತಿ ಜಾತ್ರೆ” ಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದು ಮನುಷ್ಯ ಆಧುನಿಕತೆ ಭರಾಟೆಯಲ್ಲಿ ಹಣ, ಸಂಪತ್ತು, ಆಸ್ತಿ ಏನೆಲ್ಲವನ್ನು ಸಂಪಾದಿಸಿದರೂ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ದಾರಿ ತಪ್ಪುತ್ತಿರುವ ಯುವ ಜನಾಂಗ ಕ್ಕೆ ನಮ್ಮ ಧರ್ಮ, ಸಂಸ್ಕೃತಿ-ಸಂಸ್ಕಾರ, ಸಾಂಪ್ರದಾಯಿಕ ಪದ್ಧತಿ, ಆಚರಣೆಗಳ ಬಗ್ಗೆ ಅರಿವು ಮೂಡಿಸುವದು ಮತ್ತು ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯತೆಯನ್ನು ಮೂಡಿಸಲು ಈ ಬುತ್ತಿ ಜಾತ್ರೆಯಂತಹ ಉತ್ಸವಗಳು ಸಹಕಾರಿ ಎಂದರು.
ಸಾಂಸ್ಕೃತಿಕ ವೈಶಿಷ್ಯತೆ ಹೊಂದಿದ ಈ ಬುತ್ತಿ ಜಾತ್ರೆಯಲ್ಲಿ ನವರಸಪುರ ವಿವಿಧ ಬಡಾವಣೆಗಳಿಂದ ಮುತೈದೆಯರು ಸ್ವಯಂ ಸ್ಪೂರ್ತಿಯಿಂದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಹೋಳಿಗೆ, ಪಲ್ಲೆ, ಹುಳಬಾನ, ಹಿಂಡಿ ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿ, ಬಿಳಿ ಬಟ್ಟಯಲ್ಲಿ ಬುತ್ತಿ ಕಟ್ಟಿಕೊಂಡು ಲಕ್ಷ್ಮಿ ದೇವಸ್ಥಾನ ಆಗಮಿಸಿದರು. ನಂತರ ಬುತ್ತಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಸಂಜೆ ೫.೩೦ ಗಂಟೆಗೆ ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಶಿವಯೋಗಿಗಳನ್ನು ಸಕಲ ವಾದ್ಯ, ಭಜನೆ ಮತ್ತು ಓಂ ನಮಃ ಶಿವಾಯ ಎಂಬ ಶಿವನಾಮವನ್ನು ಪಠಣ ಮಾಡುತ್ತಾ, ಲಕ್ಷ್ಮಿ ದೇವಸ್ಥಾನದಿಂದ ಶಿವಾಲಯಕ್ಕೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿತು.
ಈ ಬುತ್ತಿ ಜಾತ್ರೆಯಲ್ಲಿ ದೇವಾಲಯದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಉಪಾಧ್ಯಕ್ಷ ಭರಮಣ್ಣ ಕಡಕೋಳ, ಡಾ. ರಾಜಕುಮಾರ ಜೊಲ್ಲೆ, ಪ್ರೊ. ಬಿ.ವ್ಹಿ.ಕುಂಬಾರ, ರಾಜಶೇಖರ ಉಮರಾಣಿ, ಪ್ರೊ. ಎಂ.ಎಸ್.ಖೊದ್ನಾಪೂರ, ಅಲ್ಲಮಪ್ರಭು ಶಿರಹಟ್ಟಿ, ಶಿವಯೋಗಿ ಹತ್ತಿ, ಬಸಯ್ಯ ಮಠಪತಿ, ಬಿ.ಎಸ್.ಬೆಳಗಲಿ, ಆರ್.ಎಸ್.ಕಪಾಳಿ, ಲಕ್ಷ್ಮಿ ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳಿ, ಕಾರ್ಯದರ್ಶಿ ಶೋಭಾ ಚವ್ಹಾಣ, ಶಕುಂತಲಾ ಅಂಕಲಗಿ, ಭಾರತಿ ಪಾಟೀಲ, ಶ್ರೀಶೈಲ ಅವಜಿ, ಅರವಿಂದ ಹಂಗರಗಿ, ಸುನೀಲ ಚವ್ಹಾಣ ಇನ್ನಿತರು ಸಹ ಉಪಸ್ಥಿತರಿದ್ದರು.
ಸಂಗೀತ ಕಾರ್ಯಕ್ರಮವನ್ನು ಗಾನ ತರಂಗ ಸಂಗೀತ ಶಾಲೆಯ ಶಿಕ್ಷಕ ಶ್ರೀಶೈಲ ಬೀಳೂರ, ಸಾವಿತ್ರಿ ಹಿರೇಮಠ, ಸುನೀತಾ ಉಮರಾಣಿ ಮತ್ತು ಸವಿತಾ ಮಠಪತಿ ಇವರು ಭಕ್ತಿಗೀತೆಗಳನ್ನು ಪ್ರಚುರಪಡಿಸಿದರು.
ಈ ಬುತ್ತಿ ಜಾತ್ರೆಯಲ್ಲಿ ಎಲ್ಲ ಸದ್ಭಕ್ತರು ಯಾವುದೇ ಧರ್ಮ, ಜಾತಿ-ಮತ, ಪಂಥ ಮತ್ತು ಪಂಗಡಗಳ ಭೇದ-ಭಾವವಿಲ್ಲದೇ ಭಾವೈಕ್ಯತೆ ಮತ್ತು ಸಮಷ್ಠಿ ಭಾವದೊಂದಿಗೆ ಬುತ್ತಿ ಜಾತ್ರೆಯಲ್ಲಿ ಭಾಗವಹಿಸಿ ಮಹಾಪ್ರಸಾದ ಸ್ವೀಕರಿಸಿದರು. ಈ ಉತ್ಸವದಲ್ಲಿ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ನೂರಾರು ಜನ ಭಕ್ತಿ-ಭಾವದಿಂದ ಭಾಗವಹಿಸಿದ್ದರು.
