ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ರೇವತಗಾಂವ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವದರಿಂದ ರಾಜ್ಯ ಗಡಿ ಅಂಚಿನಲ್ಲಿ ಹಾದು ಹೋಗಿರುವ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭೀಮಾ ನದಿಗೆ ಕರ್ನಾಟಕ ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ನಿರ್ಮಿಸಿರುವ ೮ ಬಾಂದಾರ ಕಮ್ ಬ್ರಿಜ್‌ಗಳು ಜಲಾವೃತಗೊಂಡಿವೆ. ಈ ಬಾಂದಾರಗಳ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.
ಈ ಹಿನ್ನಲೆಯಲ್ಲಿ ಶುಕ್ರವಾರದಂದು ತಾಲೂಕು ಮುಖ್ಯ ಯೋಜನಾಧಿಕಾರಿ ಹಾಗೂ ವಿಪತ್ತು ನಿರ್ವಹಣಾಧಿಕಾರಿಗಳಾದ ವ್ಹಿ.ಬಿ.ಕುಂಬಾರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ. ಸಾಹಾಯಕ ನಿರ್ದೇಶಕರಾದ ಎಸ್.ಆರ್.ಕೊಟ್ಟಲಗಿ, ತಾಲೂಕಿನ ನೋಡಲ್ ಅಧಿಕಾರಿಗಳು, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಡಚಣ ತಹಶಿಲ್ದಾರ್ ಸಂಜಯ ಇಂಗಳೆಯವರು ಮಾತನಾಡುತ್ತ. ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ಹಾಗೂ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಆನರು ತಮ್ಮ ಸಾಮಾನು, ಸರಂಜಾಮುಗಳು ಹಾಗೂ ಜಾನುವಾರುಗಳೊಂದಿಗೆ ತೆರಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.