ಜಿಡಗಾ-ಮುಗಳಖೋಡ ಮಠದ ಡಾ.ಮುರುಘೇಂದ್ರ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮನುಷ್ಯನಲ್ಲಿ ನಡೆ-ನುಡಿ, ಆಚಾರ-ವಿಚಾರ ಧರ್ಮದಿಂದ ಕೂಡಿದ್ದರೆ ಅಂತಹವರನ್ನು ಭಗವಂತನು ಇಷ್ಟ ಪಡುತ್ತಾನೆ. ಇದನ್ನು ವಿಶ್ವಗುರು ಬಸವೇಶ್ವರರು ನಿಷ್ಪತಿ ಎಂಬ ಹಣ್ಣು ಕಳಚಿ ಬೀಳುವಲ್ಲಿ ತನಗೆ ಬೇಕೆಂದು ಎತ್ತಿಕೊಂಡ ಎಂಬ ವಚನವೊಂದರಲ್ಲಿ ಹೇಳಿದ್ದಾರೆ ಎಂದು ಜಿಡಗಾ-ಮುಗಳಖೋಡ ಮಠದ ಡಾ.ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯ ಗಣೇಶ ನಗರದಲ್ಲಿರುವ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ ಶ್ರಾವಣ ಮಾಸದ ಕೊನೆಯ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ದಿವ್ಯದರ್ಶನ ಹಾಗೂ ಶ್ರೀಗಳ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಸದ್ಭಕ್ತರ ಪಾದಪೂಜೆ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬಟ್ಟೆ, ಆಭರಣಗಳಿಂದ ಬೆಲೆ ಬರುವುದಿಲ್ಲ.ಮನುಷ್ಯನಿಗೆ ಒಳ್ಳೆಯ ನಡತೆ,ಒಳ್ಳೆಯ ಗುಣ, ಒಳ್ಳೆಯ ಆಚಾರ-ವಿಚಾರ, ಶ್ರೇಷ್ಠ ಭಕ್ತಿಯಿದ್ದರೆ ಮಾತ್ರ ಬೆಲೆ ಬರುತ್ತದೆ ಎಂಬುವದನ್ನು ಅರಿತುಕೊಳ್ಳಬೇಕಿದೆ ಎಂದರು.
ರಾಜ್ಯದಲ್ಲಿರುವ ನಮ್ಮ ಶ್ರೀಮಠದ ಎಲ್ಲ ಶಾಖಾಮಠದಲ್ಲಿ ಪಾದಪೂಜೆ ನೆರವೇರುತ್ತವೆ. ಶ್ರಾವಣ ಮಾಸದ ಕೊನೆಯ ದಿನ ಮುಗಳಖೋಡ ಮಠದಲ್ಲಿ ಪಾದಪೂಜೆ ನೆರವೇರುತ್ತಿತ್ತು. ಆದರೆ ಈ ವರ್ಷದ ಪಾದಪೂಜೆ ಬಸವನಬಾಗೇವಾಡಿಯ ಮಠದಲ್ಲಿ ನೆರವೇರುತ್ತಿದೆ. ನಮ್ಮ ಶ್ರೀಮಠದ ೩೬೦ ಮಠಗಳಲ್ಲಿ ಬಸವನಬಾಗೇವಾಡಿಯ ಮಠವು ಖ್ಯಾತಿ ಪಡೆಯುತ್ತಿದೆ. ಈ ಮಠದ ಮಹಾರಾಜರು ಎರಡನೇ ಆನಂದ ಮಹಾರಾಜರಾಗಿದ್ದಾರೆ. ಈ ಮಹಾರಾಜರು ಯಾರಿಗೂ ನೋವು ಆಗದಂತೆ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಈ ಮಠವು ಕೀರ್ತಿವಂತ ಮಠವಾಗಲೆಂದು ಆಶಯ ವ್ಯಕ್ತಪಡಿಸಿದ ಅವರು, ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಆಚರಿಸುವ ಶ್ರಾವಣ ಮಾಸದ ಪುಣ್ಯ ಎಲ್ಲರಿಗೂ ಪ್ರಾಪ್ತಿಯಾಗಿ ಗುರುಗಳು ಎಲ್ಲರಿಗೂ ಆಯುರಾರೋಗ್ಯ ಕರುಣಿಸಲೆಂದರು.
ಸ್ಥಳೀಯ ಯಲ್ಲಾಲಿಂಗ ಶಾಖಾಮಠದ ಬಸವರಾಜ ಮಹಾರಾಜರು ಡಾ.ಮರುಘೇಂದ್ರ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ರವಿ ಪಡಶೆಟ್ಟಿ, ಸಂಗನಗೌಡ ಚಿಕ್ಕೊಂಡ,ಗಿರೀಶ ಹಾರಿವಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಮಲ್ಲಪ್ಪ ಮಾದನಶೆಟ್ಟಿ, ಶಿವಲಿಂಗಯ್ಯ ತೆಗ್ಗಿನಮಠ, ಜಗದೀಶ ಕೊಟ್ರಶೆಟ್ಟಿ, ಸಂಗನಬಸು ಪೂಜಾರಿ,ಎಚ್.ಬಿ.ಬಾರಿಕಾಯಿ, ಅಶೋಕ ಗುಳೇದ ಸೇರಿದಂತೆ ನೂರಾರು ಸದ್ಭಕ್ತರು ಶ್ರೀಗಳಿಗೆ ಭಕ್ತಿಗೌರವ ಅರ್ಪಿಸಿದರು.