ಸಿಂದಗಿಯ ಸೋಂಪುರ ರಸ್ತೆಯಲ್ಲಿರುವ ಸರ್ವೇ ನಂ.೮೪೨/ ೨೨ ೨ಎಕರೆ ೧೦ಗುಂಟೆ ಜಮೀನು | ಆತಂಕದಲ್ಲಿ ೮೦ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳು
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಸರ್ವೇ ನಂ.೮೪೨/ ೨೨ ೨ಎಕರೆ ೧೦ಗುಂಟೆಯ ಜಮೀನಿನಲ್ಲಿ ಕಳೆದ ಹಲವು ವರ್ಷಗಳಿಂದ ಪುರಸಭೆ ನೀಡಿದ ನಿವೇಶನದಲ್ಲಿ ಜೀವಿಸುತ್ತಿರುವ ೮೦ಕ್ಕೂ ಅಧಿಕ ಕುಟುಂಬಗಳ ಮನೆಗಳನ್ನು ತೆರವುಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಕಾರ್ಯಾಲಯದ ವತಿಯಿಂದ ನೋಟಿಸ್ ನೀಡಿ ಆ.೨೩ರರೊಳಗೆ ಮನೆಗಳನ್ನು ತೆರವುಗೊಳಿಸಬೇಕು ಎಂದು ಗಡುವು ನೀಡಿದೆ. ಈ ಜಾಗೆಯಲ್ಲಿ ವಾಸಿಸುವ ಎಲ್ಲ ಜನರಿಗೆ ನೋಟಿಸ್ ನೀಡಲಾಗಿದೆ. ಕೋರ್ಟ್ ಆದೇಶಯಿರುವುದರಿಂದ ಈ ಜಾಗೆಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಹಾಗಾಗಿ ನಿವಾಸಿಗಳು ಸಹಕರಿಸಿ ಎಂದು ಸ್ಥಳದಲ್ಲಿನ ನಿವಾಸಿಗಳಿಗೆ ಮನವಿ ಮಾಡಿಕೊಂಡರು. ಅವರ ಮಾತನ್ನು ಕೇಳಿದ ನಿವಾಸಿಗರು ನಾವು ದಿನಗೂಲಿ ಕೆಲಸ ಮಾಡಿ ಬದುಕು ಸಾಗಿಸುವವರು ನಮಗೆ ಸ್ವಲ್ಪ ವಿಷಕೊಟ್ಟು ಮನೆಗಳನ್ನು ತೆರವುಗೊಳಿಸಿ ಎಂದು ಕಣ್ಣೀರಿಟ್ಟರು. ಈ ವೇಳೆ ಇಂಡಿ ಎಸಿ ಅನುರಾಧಾ ವಸ್ತçದ ಮಾತನಾಡಿ, ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳು ಕೋರ್ಟ್ಗೆ ತೆರವುಗೊಳಿಸಲಾಗುವುದು ಎಂದು ಒಪ್ಪಿಗೆ ಪತ್ರ ನೀಡಿ ಸಮಯವಕಾಶ ತೆಗೆದುಕೊಂಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೆಬೇಕು ಎಂದು ತಿಳಿಸಿದರು. ಈ ಜಮೀನಿನ ವಿವಾದ ಇಂದು ನಿನ್ನೆಯದಲ್ಲ. ಸುಮಾರು ವರ್ಷಗಳಿಂದ ನಡೆದರೂ ಪುರಸಭೆ ಪ್ರತಿನಿಧಿಗಳು ಇದರ ಕುರಿತು ಬಗೆಹರಿಸುವ ಕಾರ್ಯಕ್ಕೆ ಬರಬೇಕಾಗಿತ್ತು. ಈಗಲಾದರೂ ನಿರ್ಣಯಕ್ಕೆ ಬರಬೇಕು ಎಂದು ಡಿವೈಎಸ್‌ಪಿ ಜಗದೀಶ ಎಚ್.ಎಸ್ ಕೇಳಿಕೊಂಡರು. ಪುರಸಭೆ ಸದಸ್ಯ ಶಾಂತವೀರ ಬಿರಾದಾರ ಮಾತನಾಡಿ, ಪುರಸಭೆಯಿಂದ ಆಗಿರುವ ನಿರ್ಲಕ್ಷ್ಯತನದಿಂದ ಇಲ್ಲಿ ವಾಸಿಸುವ ಬಡವರು ಬಲಿಪಶುವಾಗಿದ್ದಾರೆ. ಪುರಸಭೆ ಹೆಸರಿನಲ್ಲಿರುವ ಜಮೀನುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ೮೪೨/೨೨ ಮಾಲೀಕರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು. ನಿವಾಸಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಏಕಾಏಕಿ ಮನೆ ತೆರವುಗೊಳಿಸಬೇಕು ಎಂದು ಹೇಳಿದರೆ ಎಲ್ಲಿಗೆ ಹೋಗಬೇಕು ಅವರಿಗೆ ಇನ್ನಷ್ಟು ೧೨-೧೫ದಿನಗಳವರೆಗೆ ಸಮಯವಕಾಶ ನೀಡಬೇಕೆಂದರು.