ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ರೈತರು ಮತ್ತೆ ಸಂಕಷ್ಟಕ್ಕೆ ಈಡಾಗಿದ್ದಾರೆ.
ಕಳೆದ ವರ್ಷ ಸಮರ್ಪಕ ಮಳೆ ಇರದೆ ಇರುವ ಕಾರಣ ಬೆಳೆಗಳ ಇಳುವರಿ ಕಡಿಮೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿ ಬೆಳೆಗಳು ನೀರಿನಲ್ಲಿ ನಿಂತು ಬೆಳೆಗಳು ಕೊಳೆತಿವೆ. ಹೀಗಾಗಿ ಈ ಬಾರಿಯೂ ರೈತರ ಬೆಳೆಗಳು ನಷ್ಟಕ್ಕೆ ಈಡಾಗಿ ರೈತ ಕಂಗಾಲಾಗಿದ್ದಾನೆ.
ಕೃಷಿ ಇಲಾಖೆಗೆ ಸಂಬಂಧಿಸಿದ ತೊಗರಿ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳು ನದಿ ಪಾತ್ರದಲ್ಲಿ ಹಾಗೂ ಬೋಳೆಗಾಂವ ಗ್ರಾಮದಲ್ಲಿ ಹಾಳಾಗಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಜಮೀನಿನಲ್ಲಿ ನೀರು ನಿಂತುಕೊಂಡು ಹಲವು ಬೆಳೆಗಳು ಹಾನಿಯಾಗಿದ್ದು ಒಂದೆಡೆಯಾದರೆ, ತೋಟಗಾರಿಕೆ ಬೆಳೆಗಳಾದ ನಿಂಬೆ ದಾಳಿಂಬೆ ಬೆಳೆಗಳು ಹಾನಿಯಾಗಿವೆ. ದಾಳಿಂಬೆ ಬೆಳೆಗೆ ಸತತ ಮಳೆಯಿಂದ ತುಂಬು ಕೊಳೆತು ದಾಳಿಂಬೆ ಕಾಯಿಗಳು ನೆಲಕಚ್ಚಿದ್ದು ರೈತರಿಗೆ ಬಾಯಿಗೆ ಬಂದ ತುತ್ತು ಕೈಗೆ ಸಿಗದಂತಾಗಿದೆ.
ಒಟ್ಟಿನಲ್ಲಿ ಪ್ರತೀ ಬಾರಿಯೂ ರೈತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಒಮ್ಮೆ ಮಳೆಯಾಗಲ್ಲ, ಮತ್ತೊಮ್ಮೆ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗುತ್ತವೆ ಹೀಗಾಗಿ ರೈತರು ಸಂಕಷ್ಟ ಅನುಭವಿಸುವುದು ಮಾತ್ರ ತಪ್ಪುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
“ಜಿಲ್ಲಾಧ್ಯಂತ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ರೈತರು ಬಿತ್ತನೆ ಮಾಡಿದ್ದ ಹಲವು ಬೆಳೆಗಳು ಹಾನಿಯಾಗಿವೆ. ಮಳೆ ಹೆಚ್ಚಿಗೆ ಆದ ಪರಿಣಾಮ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಲಿಂಬೆ ಬೆಳೆಗೆ ಸಹ ಪೆಟ್ಟು ಬಿದ್ದಿದ್ದು ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು.”
– ಎಸ್.ಬಿ. ಕೆಂಬೋಗೆ
ಜಿಲ್ಲಾಧ್ಯಕ್ಷರು, ಹಸಿರು ಸೇನೆ ರೈತ ಸಂಘಟನೆ
“ಮಳೆ ಹೆಚ್ಚಿಗೆಯಾಗಿದ್ದು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಈಗಾಗಲೆ ಹಾನಿಯಾದ ಬೆಳೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹಲವು ಕಡೆ ಲಿಂಬೆ, ದಾಳಿಂಬೆ ಬೆಳೆ ಹಾನಿಯಾದ ಬಗ್ಗೆ ರೈತರು ತಿಳಿಸಿದ್ದು ವರದಿ ತಯಾರಿಸಿ ಮೇಲಾಧಿಕಾರಿಗಳ ಗಮನ ಸೆಳೆಯುತ್ತೇವೆ.”
– ಹೆಚ್.ಎಸ್. ಪಾಟೀಲ
ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಇಂಡಿ.
“ಮಳೆ ಹಾಗೂ ಭೀಮಾನದಿಗೆ ನೀರು ಹರಿಬಿಟ್ಟ ಪರಿಣಾಮ ನದಿ ಪಾತ್ರದ ಜಮೀನಿನಲ್ಲಿನ ಬೆಳೆಗಳು ಹಾನಿಯಾಗಿವೆ. ಈ ಕುರಿತು ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.”
– ಮಹಾದೇವಪ್ಪ ಏವೂರ
ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ ಇಂಡಿ.
