ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು, ನಮ್ಮ ದೇಶ ಸ್ವಾತಂತ್ರ‍್ಯ ಹೊಂದಲು ಹಲ ಮಹನೀಯರು ತಮ್ಮ ತ್ಯಾಗ ಮಾಡಿದ್ದಾರೆ. ಕೆಲವರು ತಮ್ಮ ಅಮೂಲ್ಯ ದಿನಗಳನ್ನು ದೇಶಕ್ಕಾಗಿ ಸೆರೆಮನೆಯಲ್ಲಿ ಕಳೆದಿದ್ದಾರೆ. ಅಂತಹ ಮಹನೀಯರ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪರಿಸರದ ಸುಸ್ಥಿರತೆ ಮತ್ತು ಜಲ ಸಂರಕ್ಷಣೆಯ ದೃಷ್ಠಿಯಿಂದ ಸಮಗ್ರವಾಗಿ ಅನುಷ್ಠಾನ ಮಾಡಿರುವ ಎಲ್ಲಾ ಅಮೃತ ಸರೋವರಗಳ ದಡದಲ್ಲಿ ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವ ಹಾಗೂ ಜಲ ಸಂರಕ್ಷಣೆಯ ಮಹತ್ವ ಸಾರುವ ಉದ್ದೇಶದಿಂದ “ಒಂದು ಸರೋವರ-ಒಂದು ಸಂಕಲ್ಪ, ಜಲ ಸಂರಕ್ಷಣೆಗೆ” ಎಂಬ ಘೋಷವಾಕ್ಯದಂತೆ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ಸಹಾಯಕ ಕಾರ್ಯದರ್ಶಿ ಎ.ಕೆ.ಚಲವಾದಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಮಕ್ಕಳು ಸೇರಿದಂತೆ ಇತರರು ಹಾಜರಿದ್ದರು.

