ಪ್ರಕರಣ ಭೇದಿಸಿದ ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸರು | 8 ಆರೋಪಿಗಳ ಬಂಧನ | ₹11.32 ಕೋಟಿ ವಶ | ವಿಜಯಪುರ ಜಿಲ್ಲೆಯ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ ನಡೆಸಿ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿದ ಬಹುಕೋಟಿ ವಂಚನೆ ಪ್ರಕರಣವನ್ನು ಬಬಲೇಶ್ವರ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿ ₹11.32 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಪ್ರಕರಣದ ಕುರಿತು ಮಾಹಿತಿ ನೀಡಿದರು.
ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಜೂನ್ 12, 2026 ರಂದು ಪ್ರಕರಣ ಸಂಖ್ಯೆ 29/2026ರಡಿ BNS ಕಾಯ್ದೆಯ ಸೆಕ್ಷನ್ 316(2), 316(4), 316(5) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನಂದಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಅಶೋಕ ಸಂಗಪ್ಪ ತಿಪ್ಪರೆಡ್ಡಿ ಅವರು ನೀಡಿದ ದೂರಿನ ಮೇರೆಗೆ, ಕಾರ್ಖಾನೆಯ ಕಬ್ಬು ತೂಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಧರಪ್ಪ ದುಂಡಪ್ಪ ನಾವಿ ಹಾಗೂ ಇತರರು ಸೇರಿ 2020-21ರಿಂದ 2025-26ರ ವರೆಗೆ ಆರು ಹಂಗಾಮುಗಳಲ್ಲಿ ಕೃತಕ ಟೋಕನ್ ಹಾಗೂ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ರೈತರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ತನಿಖೆಯಲ್ಲಿ ಬಯಲಾದ ಅಂಶಗಳು: ಪೊಲೀಸರ ತನಿಖೆಯಲ್ಲಿ ಆರೋಪಿಗಳು ಕಾರ್ಖಾನೆಯ ತೂಕ ಮಾಪನ ವ್ಯವಸ್ಥೆಯಲ್ಲಿದ್ದ ಕೆಲ ಸಿಬ್ಬಂದಿಯ ಸಹಕಾರದೊಂದಿಗೆ ನಕಲಿ ಟೋಕನ್‌ಗಳನ್ನು ಸೃಷ್ಟಿಸಿ, ಕಬ್ಬು ಸಾಗಣೆ ವಾಹನಗಳ ತೂಕಕ್ಕೆ ಹೊಂದಾಣಿಕೆ ಮಾಡಿ ಬೋಗಸ್ ಬಿಲ್‌ಗಳನ್ನು ತಯಾರಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಸುಮಾರು 34,490.699 ಮೆಟ್ರಿಕ್ ಟನ್ ಕಬ್ಬಿನ ತೂಕವನ್ನು ಕೃತಕವಾಗಿ ದಾಖಲಿಸಿ ₹12,33,22,793 ಹಣವನ್ನು 91 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಪೊಲೀಸರ ಪ್ರಕಾರ, ಈ ಆರೋಪಿಗಳು ಈ ಹಿಂದೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿಯೂ ಇದೇ ರೀತಿಯ ವಂಚನೆ ನಡೆಸಿದ್ದ ಹಿನ್ನೆಲೆ ಹೊಂದಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ವಿವರಿಸಿದರು.

ವಶಪಡಿಸಿಕೊಂಡ ಹಣ
ತನಿಖೆ ವೇಳೆ ಪ್ರಮುಖ ಆರೋಪಿ ಧರಪ್ಪ ನಾವಿಯಿಂದ ₹21 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿದ್ದ ₹4,80,47,981, ಇತರ ಖಾತೆಗಳಿಂದ ₹5,48,52,102,
ಹೀಗೆ ಒಟ್ಟು ₹10,50,00,083 ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಬ್ಯಾಂಕ್ ಖಾತೆಗಳಲ್ಲಿ ₹82,07,569 ಮೊತ್ತವನ್ನು ಫ್ರೀಜ್ ಮಾಡಲಾಗಿದ್ದು, ಒಟ್ಟಾರೆ ₹11,32,07,569 ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
8 ಆರೋಪಿಗಳ ಬಂಧನ
ಪ್ರಮುಖ ಆರೋಪಿ ಧರೆಪ್ಪ ದುಂಡಪ್ಪ ನಾವಿ ಸೇರಿದಂತೆ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಇತರ ಆರೋಪಿತರ ಕುರಿತು ತನಿಖೆ ಮುಂದುವರಿದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ವಿವರಿಸಿದರು.
ತನಿಖಾ ತಂಡಕ್ಕೆ ಎಸ್ಪಿ ಪ್ರಶಂಸೆ
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಗ್ರಾಮೀಣ ಡಿವೈಎಸ್ಪಿ ಟಿ.ಎಸ್. ಸುಲ್ಫ್ ಅವರ ಮೇಲ್ವಿಚಾರಣೆಯಲ್ಲಿ, ಸಿಪಿಐ ರಮೇಶ ಅವಜಿ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸಿ ಆರೋಪಿಗಳನ್ನು ಪತ್ತೆಹಚ್ಚಿದೆ. ಅತ್ಯುತ್ತಮ ತನಿಖೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

