ಪಂಚಮಸಾಲಿ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅನ್ಯಾಯ | ಸಮಾಜ ಮುಖಂಡರಿಂದ ಸುದ್ದಿಗೋಷ್ಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಂಚಮಸಾಲಿ ಸಮಾಜದ ರಾಜು ಕಾಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಐದು ಜನ ಪಂಚಮಸಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪಂಚಮಸಾಲಿ ಸಮಾಜದ ಮುಖಂಡ ಸುರೇಶ ಶಂಕರಗೌಡ ಬಿರಾದಾರ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜ ತ್ಯಾಗ, ಶೈಕ್ಷಣಿಕ ಸೇವೆ, ಅಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪಂಚಮಸಾಲಿ ಸಮಾಜದ ಪಾತ್ರ ಪ್ರಮುಖವಾಗಿದೆ, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಸೂಕ್ತವಾದ ಪ್ರಾತಿನಿಧ್ಯ ನೀಡುವಲ್ಲಿ ವಿಫಲವಾಗಿದೆ, ಈ ಸರ್ಕಾರ ಪಂಚಮಸಾಲಿ ಸಮಾಜದ ಋಣದಲ್ಲಿದೆ, ಅದನ್ನು ಕಾಂಗ್ರೆಸ್ ಮರೆಯಬಾರದು, ಹೀಗಾಗಿ ಸಮಾಜಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಆರು ಬಾರಿ ಶಾಸಕರಾಗಿರುವ ಹಾಗೂ ಜನಪರವಾಗಿ ನಿಷ್ಠೆಯ ಉದಾರಹಣೆಯಾಗಿರುವ ರಾಜು ಕಾಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು, ವಿಜಯಪುರ ಜಿಲ್ಲೆಯಿಂದ ಆಯ್ಕೆಯಾದ, ಹಿರಿಯರಾದ ಶಿವಾನಂದ ಪಾಟೀಲ, ಯುವ ಶಾಸಕ ಅಶೋಕ ಮನಗೂಳಿ, ಬೆಳಗಾವಿಯ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಹಾಗೂ ನೆರೆಯ ಬಾಗಲಕೋಟೆ ಜಿಲ್ಲೆಯ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನ ಮಾನಗಳಲ್ಲಿ ಗೃಹ ಇಲಾಖೆ ನಮ್ಮ ಸಮಾಜದ ಹೋರಾಟಕ್ಕೆ ಅನುಮತಿಕೊಟ್ಟರೆ ಇಡಿ ಪಂಚಮಸಾಲಿ ಸಮಾಜ ರಸ್ತೆಗಿಳಿದು ಹೋರಾಟ ಮಾಡಲು ಸಿದ್ದರಿದ್ದೇವೆ. ಹಿಂದೆ ೨ಎ ಹೋರಾಟದಲ್ಲಿ ಲಾಠಿ ಚಾರ್ಜ ಮಾಡಿಸಿ ಇಲ್ಲಸಲ್ಲದ ಕೇಸ ಹಾಕಿರುವದು ನಮ್ಮ ಸಮಾಜ ಎಂದೂ ಮರೆಯುವದಿಲ್ಲ ಮತ್ತು ಆ ಗಾಯ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈಗಾಗಲೆ ಮೊದಲನೆ ಸಂಪೂಟ ವಿಸ್ತರಣೆಯಲ್ಲಿ ನಮ್ಮ ಸಮಾಜ ಕಡೆಗಣಿಸಿರುವದು, ಕಾಂಗ್ರೇಸ್ ಪಕ್ಷ ದೊಡ್ಡ ಪ್ರಮಾದ ಎಸಗಿದೆ. ಪಂಚಮಸಾಲಿ ಸಮಾಜಕ್ಕೆ ಮಾಡುತ್ತಿರುವ ಪ್ರಮಾದವನ್ನು ಕಾಂಗ್ರೆಸ್ ಸರಿಪಡಿಸಿಕೊಳ್ಳಬೇಕು, ಇಲ್ಲವಾದರೆ ೨೦೨೮ ರ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಾಗುವದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ಪಾಟೀಲ, ಡಾ. ಶಿವಾನಂದ ರೇಷ್ಮಿ, ಗಣೇಶ ಮಣೂರ ಉಪಸ್ಥಿತರಿದ್ದರು.

