ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವ್ವಾತಂತ್ರ‍್ಯವನ್ನು ಕಾಪಾಡಿಕೊಳ್ಳುವ ಶಕ್ತಿಯು ಶಿಕ್ಷಣದಲ್ಲಿದೆ. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದು ಅಲ್ಲ, ಅದು ಚಿಂತನೆಗೆ ಬಲ. ಸಮಾಜಕ್ಕೆ ದೃಷ್ಟಿ, ಮತ್ತು ವ್ಯಕ್ತಿತ್ವಕ್ಕೆ ದಿಕ್ಕು ನೀಡುತ್ತದೆ. ಮಹಿಳೆಯರು ಶಿಕ್ಷಣದ ಮೂಲಕ ಸ್ವಾವಲಂಬಿಗಳಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಿಳಾ ವಿಶ್ವವಿದ್ಯಾಲಯವು ಮಹಿಳೆಯರ ಶೈಕ್ಷಣಿಕ, ಬೌದ್ಧಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಸಬಲೀಕರಣಕ್ಕೆ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ನಾವು ಗುಣಮಟ್ಟದ ಬೋಧನೆ ಮತ್ತು ಸಂಶೋಧನೆ, ಡಿಜಿಟಲ್ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ, ಅಂತಾರಾಷ್ಟ್ರೀಯ ಸಹಯೋಗಗಳು, ಉದ್ಯಮ-ವಿಶ್ವವಿದ್ಯಾಲಯ ಸಂಪರ್ಕ, ಗ್ರಾಮೀಣ ಮತ್ತು ಹಿಂದುಳಿದ ಮಹಿಳೆಯರ ಒಳಗೊಳ್ಳುವಿಕೆಗೆ ವಿಸ್ತರಣಾ ಚಟುವಟಿಕೆಗಳನ್ನು ಬಲಪಡಿಸುವುದರತ್ತ ನಾವು ಹೆಚ್ಚಿನ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬರು ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಸಮಾರಂಭದಲ್ಲಿ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಅಪ್ಸಾನಾ ಮುಲ್ಲಾ (ಪ್ರಥಮ), ಚೈತ್ರಾ ಬಿರಾದಾರ (ದ್ವಿತೀಯ) ಮತ್ತು ಲಕ್ಷ್ಮಿ ಕರ್ನಾಳ (ತೃತೀಯ) ನಗದು ಬಹುಮಾನಗಳನ್ನು ವಿತರಿಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಕ್ರೀಡಾ ನಿರ್ದೇಶಕ ಹಣಮಂತಯ್ಯ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ವಂದೇ ಮಾತರಂ ಗೀತೆ ಮತ್ತು ರಾಷ್ಟ್ರೀಯ ಭಾವೈಕ್ಯೆತೆಯ ಗೀತೆಗಳನ್ನು ಹಾಡಿದರು. ಸಹಾಯಕ ಕ್ರೀಡಾ ನಿರ್ದೇಶಕ ವಿಶ್ವನಾಥ ನಡಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

