ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿನ ಡಾ.ಫ.ಗು.ಹಳಕಟ್ಟಿ ಸಭಾ ಭವನದಲ್ಲಿ ಶನಿವಾರ ಸಂಸ್ಥೆಯ ಅಧ್ಯಕ್ಷರು, ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಸಿದ್ದೇಶ್ವರ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ವಿಶೇಷ ಸಭೆಯಲ್ಲಿ ಶತಮಾನ ಕಂಡ, ಪ್ರತಿಷ್ಠಿತ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಗೆ ನೂತನವಾಗಿ ಏಳು ಜನ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.
ಚಂದಪ್ಪ ಹುಂಡೇಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ ಹಾಗೂ ಸಂಸ್ಥೆಯ ನಿರ್ದೇಶಕರಾಗಿದ್ದ ಶಶಿಧರ ಹಕ್ಕಾಪಕ್ಕಿ ಅವರ ನಿಧನ ಹಿನ್ನೆಲೆ ನೇಮಕ ಮಾಡಲಾದ ಅವರ ಪುತ್ರ ಮಲ್ಲಿಕಾರ್ಜುನ ಹಕ್ಕಾಪಕ್ಕಿ ಅವರು ಶಿವಯೋಗಿ ಶ್ರೀ ಸಿದ್ದೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈಚೆಗೆ ಜರುಗಿದ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಚರ್ಚಿಸಿದ ವಿಷಯ ಸಂಖ್ಯೆ-೫ ರಂತೆ ಸ್ಥಳೀಯ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು ೧೫ ರಿಂದ ೨೧ಕ್ಕೆ ಏರಿಸಲು ಸಂಪೂರ್ಣವಾದ ಅಧಿಕಾರವನ್ನು ಅಧ್ಯಕ್ಷರಿಗೆ ವಹಿಸಿ, ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು. ಅದರಂತೆ ಠರಾವು ಪಾಸು ಮಾಡಲಾಗಿತ್ತು. ಆ ಅಧಿಕಾರ ಬಳಸಿಕೊಂಡು ನೂತನ ೬ ಜನ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಸಿದ್ದೇಶ್ವರ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಲಾಗುತ್ತಿದೆ. ಇದಕ್ಕೆ ಕಾರಣ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ. ಎಲ್ಲ ನಿರ್ದೇಶಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ ಶ್ರಮವಹಿಸಿದರೆ, ಸಂಸ್ಥೆ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂದರು.
ಇದೇ ವೇಳೆ ನೂತನ ನಿರ್ದೇಶಕರಿಗೆ ಸನ್ಮಾನಿಸಲಾಯಿತು. ಅಧಿಕಾರ ಸ್ವೀಕರಿಸುವ ಪೂರ್ವದಲ್ಲಿ ಆರಾಧ್ಯದೈವ ಶ್ರೀ ಸಿದ್ದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಚೇರಮನರಾದ ಬಸಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷರಾದ ಬಸವರಾಜ ಸುಗೂರ, ನಿರ್ದೇಶಕರಾದ ಶಿವಾನಂದ ನೀಲಾ, ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ್ ಡೋಣಿ, ಬಸವರಾಜ ಗಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ಪ್ಯಾಟಿ ಇದ್ದರು.
Related Posts
Add A Comment