ಉದಯರಶ್ಮಿ ದಿನಪತ್ರಿಕೆ
ಮುದ್ದೆಬಿಹಾಳ: ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಕರಾದರೆ ಪತ್ರಕರ್ತರು ಇಡೀ ಸಮಾಜಕ್ಕೆ ಶಿಕ್ಷಕರು. ವೈದ್ಯರು ರೋಗಿಗಳಿಗೆ ಮಾತ್ರ ವೈದ್ಯರಾದರೆ ಪತ್ರಕರ್ತರು ಇಡೀ ಸಮಾಜಕ್ಕೆ ವೈದ್ಯರು ಎಂದು ಉಪನ್ಯಾಸಕ ರಾಜನಾರಾಯಣ ನಲವಡೆ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರಿಹಂತ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪತ್ರಿಕೋದ್ಯಮ ಲಾಭದಾಯಕ ಹುದ್ದೆ ಅಲ್ಲ. ಅದೊಂದು ಸಮಾಜಮುಖಿ ಕಾರ್ಯ. ಈ ಹುದ್ದೆಯನ್ನು ಅಲಂಕರಿಸುವವರು ಸಮಾಜದ ಅಂಕು ಡೊಂಕುಗಳನ್ನು, ಓರೆ ಕೋರೆಗಳನ್ನು ತಿದ್ದಲು ಬರಬೇಕೆ ಹೊರತು ಸಂಪಾದನೆಗಾಗಿ ಬರಬಾರದು. ಪತ್ರಕರ್ತರು ಒಂದು ವೇಳೆ ಆಸೆ ಆಮೀಷಗಳಿಗೆ ಒಳಗಾಗಿ ಸತ್ಯವನ್ನು ಮುಚ್ಚಿ ಅಥವಾ ತಿರುಚಿ ಸುದ್ದಿ ಮಾಡಿದರೆ ಅದರಿಂದ ಇಡೀ ಸಮಾಜ ಹಾಳಾಗುತ್ತದೆ ಎಂದರು.
ಮಾಜಿ ಶಾಸಕ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಧ್ಯದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಪತ್ರಕರ್ತ ಇದು ತಂತ್ರಜ್ಞಾನ ನಮಗೆ ಕೊಟ್ಟ ಕೊಡುಗೆ. ಇದರ ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಡಬೇಕೆ ಹೊರತು ಸುಳ್ಳು ಸುದ್ದಿ ಹರಡಿ ಸಮಾಜವನ್ನು ಕಲುಷಿತಗೊಳಿಸಬಾರದು ಎಂದರು.
ಮುಖ್ಯ ಅತಿಥಿಯಾಗಿದ್ದ ಅರಿಹಂತ ಕಾಲೇಜಿನ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಸಧ್ಯದ ದಿನಮಾನಗಳಲ್ಲಿ ವರದಿಗಾರರಿಗೆ ಪತ್ರಿಕೆ ಮಾರುವ ಜವಾಬ್ದಾರಿ ನೀಡಿದ್ದು, ಇದರಿಂದ ಪತ್ರಕರ್ತರು ಬೆಳಿಗ್ಗೆ ಪತ್ರಿಕೆ ಹಂಚಿ, ಬಿಲ್ ಕಲೆಕ್ಟ್ ಮಾಡುವಲ್ಲಿಯೇ ಹೆಚ್ಚಿನ ಸಮಯ ಕಳೆಯುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಮೂರು ನಾಲ್ಕು ವರ್ಷಗಳಿಗೊಮ್ಮೆ ಪತ್ರಿಕೆಯ ಏಜೆಂಟರು ಬದಲಾಗುತ್ತಿದ್ದಾರೆ. ಈ ನ್ಯೂನ್ಯತೆಗಳು ಬದಲಾಗಬೇಕಿದೆ ಎಂದರು.
ಮತ್ತೋರ್ವ ಅತಿಥಿಯಾಗಿದ್ದ ಕಾನಿಪ ರಾಜ್ಯಕಾರಣಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಸಂಘದ ಸದಸ್ಯರೇ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಸಮಾರಂಭವನ್ನು ಯಶಸ್ವಿಗೊಳಿಸಿ ಮಾದರಿಯಾಗಿದ್ದೇವೆ ಎಂದರು.
ಈ ವೇಳೆ ಸಂಘದ ಸದಸ್ಯರಾದ ರಿಯಾಜ ಮುಲ್ಲಾ, ಹಣಮಂತ ಬೀರಗೊಂಡ, ಹಣಮಂತ ಟಕ್ಕಳಕಿ, ಕೃಷ್ಣಾ ಕುಂಬಾರ, ಈಶ್ವರ ಈಳಗೇರ ಇವರುಗಳಿಗೆ ತಾಲೂಕು ಉತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿದರೆ, ಸಂಘದ ಹಿರಿಯ ಸದಸ್ಯ ಬಸವರಾಜ ಕುಂಬಾರ ಅವರ ಪುತ್ರಿ ಭಾಗ್ಯಶ್ರೀ ಇವಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ಸಂಘದ ನೂತನ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಅವಶ್ಯವಾಗಿ ಬೇಕಾಗುವ ಸಲಕರಣೆಗಳ (ಸನ್ಮಾನದ ಕಿಟ್ ಹಾಗೂ ಪ್ರಶಸ್ತಿ ಫಲಕಗಳು) ಜಬಾಬ್ದಾರಿಗಳನ್ನು ಸಂಘದ ಹಿರಿಯ ಸದಸ್ಯ ಎಚ್.ಆರ್.ಬಾಗವಾನ, ಸದಸ್ಯರಾದ ಪುಂಡಲೀಕ ಮುರಾಳ ಮತ್ತು ಮಕಬುಲ್ ಬನ್ನೆಟ್ಟಿ ಹೊತ್ತಿದ್ದರು. ಸಂಘದ ಸದಸ್ಯರಾದ ನಾಗೇಂದ್ರ ಶಿವಶಿಂಪಿ, ಮಕ್ಬುಲ್ ಬನ್ನೆಟ್ಟಿ, ಸೂರಜ ರಿಸಾಲದಾರ, ಚೇತನ ಶಿವಶಿಂಪಿ, ಲಾಡ್ಲೇಮಶಾಕ ನದಾಫ್, ವಿ.ಎಂ.ನೂಲಿನವರ, ಸಿದ್ದು ಚಲವಾದಿ, ಅಮೀನಸಾ ಮುಲ್ಲಾ, ಮುತ್ತು ಬೀರಗೊಂಡ, ರಾಜಶೇಖರ ಸಜ್ಜನ, ಬಂದೇನವಾಜ ಕುಮಸಿ, ಸಾಗರ ಉಕ್ಕಲಿ, ಬಸನಗೌಡ ಪಾಟೀಲ, ಗುರುರಾಜ ಬಡಿಗೇರ, ಈರಯ್ಯ ಹಿರೇಮಠ, ಮಹೆಬೂಬ ಹಳ್ಳೂರ ಭಾಗಿಯಾಗಿದ್ದರು.
ರವಿ ನಂದೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರೇನಬಿ ನದಾಫ ನಿರ್ವಹಿಸಿದರು.

