ಸಿಂದಗಿ: ಸನಾತನ ಎಂಬುದು ಯಾರೊಬ್ಬರಿಂದ ಸ್ಥಾಪನೆಗೊಂಡಂತಹ ಧರ್ಮವಲ್ಲ. ಇದು ಭಗವಂತ ಸೃಷ್ಟಿ ಮಾಡಿದಂತಹ ಸನಾತನ ಧರ್ಮ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಪಟ್ಟಣದ ಊರನ ಹಿರಿಯಮಠದ ಶಾಂತೇಶ್ವರ ಚೌಕ ಸನಾತನ ಹಿಂದೂ ವೇದಿಕೆಯ ವತಿಯಿಂದ ಹಮ್ಮಿಕೊಂಡ ವಿಸರ್ಜನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋಘಲರು, ಬ್ರಿಟಿಷರು, ಡಚ್ಚರು, ಪೋರ್ಚಗೀಸ್‌ರು ಸನಾತನ ಧರ್ಮವನ್ನು ನಾಶ ಮಾಡಲಿಕ್ಕೆ ಬಂದವರು. ಆದರೆ ಇವರೆಲ್ಲರೂ ನಮ್ಮ ಧರ್ಮದ ಮೇಲೆ ದಾಳಿಮಾಡಿದರೂ ಸಹ ಸನಾತನ ಕೇಸರಿ ಧ್ವಜ ಇವತ್ತು ಭಾರತದಲ್ಲಿ ಹಾರಾಡುತ್ತಿದೆ. ಸನಾತನ ಧರ್ಮ ನಾಶ ಮಾಡಲೂ ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ಗಣೇಶನ ಉತ್ಸವ ಇಡೀ ಭಾರತದಲ್ಲಿ ಸನಾತನದ ಹೆಸರಿನಲ್ಲಿ ಆಗುತ್ತಿರುವುದು ಹೆಮ್ಮೆಯ ವಿಷಯ.
ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಾಡುತ್ತಿರಲಿಲ್ಲ. ಆದರೆ ಇಂದು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯವಾಯಿತು. ಜ.೨೬ಕ್ಕೆ ಅಯೋಧ್ಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಅದಾದ ಬಳಿಕ ವಿಜಯಪುರದಿಂದ ದರುಶನಕ್ಕಾಗಿ ಎರಡು ರೈಲುಗಳನ್ನು ಬಿಡಲಾಗುವುದು ಎಂದರು.
ನಾವು ನಿಸರ್ಗವನ್ನು ಪೂಜೆ ಮಾಡುತ್ತೇವೆ. ಏಕೆಂದರೆ ಅವುಗಳಿಂದಲೇ ಮಾನವನ ಸಮಾಜವಿದೆ. ದಕ್ಷಿಣ ದೃವದಲ್ಲಿ ಮೊದಲು ಚಂದ್ರನ ಮೇಲೆ ಧ್ವಜ ಹಾರಿಸಿದ್ದು ನಮ್ಮ ಭಾರತ. ಮುಂದೆ ಸೂರ್ಯನ ಮೇಲೆ ಧ್ವಜ ಹಾರಿಸುವ ನಿಟ್ಟಿನಲ್ಲಿಯೂ ಇದ್ದೇವೆ ಎಂದರು.
ಅಯೋಧ್ಯ ಆಯ್ತು. ಮುಂದೆ ಕಾಶಿ, ಮಥುರಾದಲ್ಲೂ ಮಂದಿರ ನಿರ್ಮಾಣ ಮಾಡುವೆವು. ಮುಂದಿನ ದಿನಮಾನಗಳಲ್ಲಿ ಸನಾತನ ಧರ್ಮ ಉಳಿಬೇಕು. ಇಲ್ಲಿರೂವವರಾರೂ ಕಾಂಗ್ರೆಸ್ ನ ಗ್ಯಾರಂಟಿಗಳಿಗೆ ಆಸೆ ಬೀಳಬೇಡಿ. ಇದರ ವಾರಂಟಿ ಲೋಕಸಭೆವರೆಗೂ ಮಾತ್ರ ಎಂದರು.
ಈ ವೇಳೆ ಭೀಮಾಶಂಕರ ಮಠದ ಪೀಠಾಧಿಪತಿ ದತ್ತಪ್ಪಯ್ಯ ಮಹಾರಾಜರು, ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಗಜಾನನ ಮಂಡಳಿ ಅಧ್ಯಕ್ಷ ಕಿರಣ ಶಿವಶಿಂಪಿ, ಸತೀಶ ಹಿರೇಮಠ, ಅನಸೂಯ ಪರಗೊಂಡ ಸೇರಿದಂತೆ ಗಜಾನನ ಮಂಡಳಿಯ ಸದಸ್ಯರು. ಯುವಕರು, ಅಭಿಮಾನಿಗಳಿದ್ದರು.
Related Posts
Add A Comment