ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣ ಸಮೀಪದ ಉಪ್ಪಲದಿನ್ನಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಫೌಜಿ ಡಾಭಾ ಸಮೀಪದ ಸೈನಿಕ ಸರ್ಕಲ್ ಹತ್ತಿರ ಮನೆಗಳ ಕಳ್ಳತನಕ್ಕೆ ಹೊಂಚು ಹಾಕಿ ಕುಳಿತಿದ್ದ 9 ಜನ ಧರೋಡೆಕೋರರನ್ನು ಖಚಿತ ಮಾಹಿತಿ ಮೇರೆಗೆ ಹೆಡೆಮುರಿಕಟ್ಟುವಲ್ಲಿ ಕೊಲ್ಹಾರ ಠಾಣೆ ಪೊಲೀಸರು ಯಶಸ್ವಿಯಗಿದ್ದಾರೆ.
ಕಳೆದ ಬುಧವಾರ ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಉಪ್ಪಲದಿನ್ನಿ ರಸ್ತೆಯಲ್ಲಿರುವ ಫೌಜಿ ಡಾಬಾ ಹತ್ತಿರದ ಕ್ರಾಸ್ ಮಾರ್ಗವಾಗಿ ಹೋಗಿ ಬರುವ ವಾಹನಗಳನ್ನು ನಿಲ್ಲಿಸಿ ಹಣ ಸುಲಿಗೆ ಹಾಗೂ ಹಳ್ಳದಗೆಣ್ಣೂರ ಗ್ರಾಮದಲ್ಲಿ ಒಂದು ಮನೆ ದರೋಡೆ ಮಾಡುವ ಉದ್ದೇಶದಿಂದ ಸದರಿ 9 ಜನ ಆರೋಪಿತರು ಮುಖಕ್ಕೆ ಕಪ್ಪು ಬಟ್ಟೆ, ಟವೆಲ ಕಟ್ಟಿಕೊಂಡು ತಮ್ಮ ಕೈಯಲ್ಲಿ ಖಾರದ ಪುಡಿ, ಕಬ್ಬಿಣದ ಸಲಾಕೆ, ಬಡಿಗೆ ಮುಂತಾದ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೊಂಚು ಹಾಕುತ್ತಾ ನಿಂತಿದ್ದನ್ನು ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಎಂ.ಬಿ. ಬಿರಾದಾರ ಹಾಗೂ ಅಪರಾಧ ವಿಭಾಗದ ಪಿಎಸ್ಐ ಆರ್.ಹೆಚ್. ಹಳ್ಳಿ, ಎ.ಎಸ್.ಐ ಬಂದಗಿಸಾಬ ನಿಡೋಣಿ ಹಾಗೂ ಸಿಬ್ಬಂದಿಗಳಾದ ಜೈಭೀಮ ಶಾಂತಗಿರಿ, ರಾಜಕುಮಾರ ರಂಗಪ್ಪಗೊಳ, ಪರಶುರಾಮ ಬಿರಾದಾರ, ಶಿವಾನಂದ ಮ್ಯಾಗೇರಿ, ಚಿದಾನಂದ ಗಿಡಗಿಂಚಿ, ಹಾಲಪ್ಪ ಕರಿಗಾರ, ಈರಣ್ಣ ಗೋಕಾವಿ, ರಾಜಅಹ್ಮದ ಕರಜಗಿ, ಶ್ರೀಕಾಂತ ಹಾಲಪ್ಪನವರ ನೇತೃತ್ವದಲ್ಲಿ 9 ಜನ ಆರೋಪಿತರ ಸಹಿತ ಮಾರಕಾಯುಧಗಳು ಒಂದು ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತರನ್ನು ಅಥಣಿ ತಾಲೂಕಿನ ಸತ್ತಿ ಗ್ರಾಮದ ಸಂತೋಷ ಶಿವರುದ್ರಪ್ಪ ಹಿರೇಮಠ, ಪುಲಕೇಶಿ ಮನೋಹರ ದೊಡಮನಿ, ಶಾನೂರ ಬುರಾನಸಾಬ ಅತ್ತಾರ, ಬಬಲೇಶ್ವರ ತಾಲೂಕಿನ ದನ್ಯಾಳ ಗ್ರಾಮದ ಕಲ್ಲನಗೌಡ ಸಿದ್ದಪ್ಪ ಬಿರಾದಾರ, ತಿಕೋಟಾ ತಾಲ್ಲೂಕಿನ ಲೋಗಾಂವಿ ಗ್ರಾಮದ ನಾಗರಾಜ ಭೀಮಣ್ಣ ಮಳೆಪ್ಪಗೋಳ, ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಅಶೋಕ ಲಾಯಪ್ಪ ಪೂಜಾರಿ, ತಿಗಣಿಬಿದರಿ ಗ್ರಾಮದ ಶಿವಾನಂದ ಮಲ್ಲಪ್ಪ ಬಿರಾದಾರ ಮತ್ತು ಬನಹಟ್ಟಿಯ ಜಾವೀದ ಬಸೀರಸಾಬ ರಾಜಣ್ಣವರ, ಸಿದ್ದಾರೂಢ ಸುರೇಶ ಹಿರೇಮಠ ಎಂಬುವರು ಬಂಧಿತರು.
